Tuesday, April 22, 2025
Google search engine

Homeರಾಜಕೀಯಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ: ಜಗದೀಶ್ ಶೆಟ್ಟರ್

ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಉತ್ತರ ಪ್ರದೇಶ ಮಾದರಿಯಲ್ಲಿ ಗೂಂಡಾ ರಾಜ್ಯವಾಗುತ್ತಿದ್ದು, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು.

ನಗರದ ವೀರಾಪುರ ಓಣಿ ಕರಿಯಮ್ಮನ ಗುಡಿ ಬಳಿ ಹತ್ಯೆಯಾದ ಅಂಜಲಿ ಅಂಬಿಗೇರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಉತ್ತರ ಪ್ರದೇಶ ಮೊದಲು ಗೂಂಡಾ ರಾಜ್ಯವಾಗಿತ್ತು. ಅಲ್ಲಿ ಯೋಗಿ ಆದಿತ್ಯನಾಥ ಸಿಎಂ ಆದ ನಂತರ ಶಾಂತಿ ನೆಲೆಸಿದೆ. ಅವರು ಯಾವುದೇ ಕಾನೂನು ಬದಲಾವಣೆ ಮಾಡದೇ ಇದ್ದ ಕಾನೂನಿನಲ್ಲಿಯೇ ಎಲ್ಲವನ್ನೂ ನಿಭಾಯಿಸಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಅಂತಹ ದಿಟ್ಟ ನಿರ್ಧಾರವನ್ನು ರಾಜ್ಯದ ಮುಖ್ಯಮಂತ್ರಿಗಳು ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಗೃಹ ಸಚಿವರು ಸಭೆ ನಡೆಸಿ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲನೆ ಮಾಡಬೇಕಿತ್ತು. ಆದರೆ ಗೃಹ ಇಲಾಖೆ ಇವೆಲ್ಲವನ್ನೂ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ನೇಹಾ ಹಿರೇಮಠ ಕೊಲೆಯಾದಾಗ ರಾಜ್ಯ ತಲ್ಲಣಗೊಂಡಿತ್ತು. ಕಾಲೇಜ್ ಕ್ಯಾಂಪಸ್‌ನಲ್ಲೇ ಕೊಲೆಯಾಗಿದೆ. ಕಾನೂನು ಸುವ್ಯವಸ್ಥೆ ಇಲ್ಲ ಅನ್ನುವ ಚರ್ಚೆ ನಡೆದಿತ್ತು. ಸರ್ಕಾರ ಇದನ್ನು ಗಂಭಿರವಾಗಿ ತೆಗೆದುಕೊಳ್ಳಬೇಕಿತ್ತು. ಕೊಲೆ, ಸುಲಿಗೆ, ದರೋಡೆ ನಡೆಯುತ್ತಿದೆ. ಇದನ್ನು ಸರ್ಕಾರ ನಿಯಂತ್ರಣ ಮಾಡಲು ಆಗುತ್ತಿಲ್ಲ.‌ ಸಚಿವರು ನೇಹಾ ಹತ್ಯೆಯಾದಾಗ ಬೇಜಾವ್ದಾರಿಯಾಗಿ ಮಾತನಾಡಿದ್ದರು. ಆದರೀಗ ಅಂಜಲಿ ಹತ್ಯೆಯಾಗಿದೆ ಎಂದರು.

ನಾನು ಅವರ ಅಮ್ಮನ ಜೊತೆ ಮಾತನಾಡಿದೆ. ಮೊದಲೇ ಅವರಿಗೆ ಬೆದರಿಕೆ ಇತ್ತು. ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದರು. ಆದರೆ ಪೊಲೀಸರು ಕುಚೇಷ್ಠೆ ಮಾಡಿ ಅವರನ್ನು ಕಳುಹಿಸಿದರು. ಸರ್ಕಾರದ ವ್ಯವಸ್ಥೆ ಕುಸಿದು ಹೋಗಿದೆ. ಅದರಲ್ಲೂ ಹುಬ್ಬಳ್ಳಿ-ಧಾರವಾಡದಲ್ಲಿ ಸಂಪೂರ್ಣವಾಗಿ ಕುಸಿದು ಹೋಗಿದೆ. ವ್ಯವಧಾನದಿಂದ ಹೇಳುವ ಮಾತೇ ಇಲ್ಲ. ಇವತ್ತು ಕರ್ನಾಟಕ ಗೂಂಡಾ ರಾಜ್ಯವಾಗಿದೆ. ಜನರ ನೆಮ್ಮದಿ ಕೆಡಿಸುವ ಕೆಲಸ ಸರ್ಕಾರ ಮಾಡಿದೆ ಎಂದರು.

ಇವತ್ತು ಆರೋಪಿ ಗಿರೀಶ್ ಬಂಧನವಾಗಿದ್ದಾನೆ. ಆದರೆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಂಜಲಿ ಆತ್ಮಕ್ಕೆ ಶಾಂತಿ ಸಿಗಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಸಿಬೇಕು ಎಂದು ಒತ್ತಾಯಿಸಿದರು.

RELATED ARTICLES
- Advertisment -
Google search engine

Most Popular