ರಾಮನಗರ: ಸರ್ಕಾರಿ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಬಳಿ ಸಾರ್ವಜನಿಕರು ಅಹವಾಲು ತಂದಾಗ ಅವರಿಗೆ ಸೇವೆ ಮಾಡುವುದನ್ನು ಕಲಿಯಿರಿ ಮತ್ತು ಸೇವಾ ಮನೋಭಾವನ್ನು ಹೆಚ್ಚಿಸಿಕೊಳ್ಳಿ ಎಂದು ರಾಮನಗರ ಜಿಲ್ಲಾ ಲೋಕಾಯುಕ್ತ ಜೋಶಿ ಶ್ರೀನಾಥ್ ಮಹದೇವ್ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಮನಗರ ಲೋಕಾಯುಕ್ತ ಆಯೋಜಿಸಿದ್ದ ಸಾರ್ವಜನಿಕ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರಿ ಮತ್ತು ಸಿಬ್ಬಂದಿಗಳು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುವುದನ್ನು ರೂಢಿಸಿಕೊಳ್ಳಿ ಹಾಗೂ ಸಾರ್ವಜನಿಕರು ಕಛೇರಿಗೆ ಅಲೆದಾಡುವುದನ್ನು ತಪ್ಪಿಸುವಂತಹ ಕಾರ್ಯ ಮಾಡುವುದನ್ನು ರೂಢಿಸಿಕೊಳ್ಳಿ ಎಂದರು.
ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ಕೌಶಲ್ಯವಿರುತ್ತದೆ ಅದನ್ನೇ ಬಳಸಿಕೊಂಡು ಸಾರ್ವಜನಿಕ ಮುಖಿಯಾಗಿ ಕಾರ್ಯನಿರ್ವಹಿಸಬೇಕು ನಿಮ್ಮಿಂದ ಸಾಧ್ಯವಾಗದನ್ನು ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಎಂದರು.
ಕಚೇರಿಯಲ್ಲಿ ಸೂಚನಾ ಫಲಕ ಅಳವಡಿಸಿ: ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ದೊರೆಯುವ ಸೌಲಭ್ಯಗಳ ಕುರಿತು ತಮ್ಮ ಕಚೇರಿಯಲ್ಲಿ ಸೂಚನಾ ಫಲಕವನ್ನು ಇನ್ನು 10 ದಿನಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಇಲ್ಲವಾದಲ್ಲಿ ಲೋಕಾಯುಕ್ತ ರವರೆ ಸ್ವಯಂ ಪ್ರಕರಣವನ್ನು ದಾಖಲಿಸುತ್ತಾರೆ. ಸೂಚನಾ ಫಲಕದಲ್ಲಿ ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳ ವಿವರ, ಶುಲ್ಕ, ಸಮಯ ಹಾಗೂ ಅರ್ಜಿ ಜೊತೆಯಲ್ಲಿ ಸಲ್ಲಿಸಬೇಕಾದ ದಾಖಲಾತಿಗಳ ವಿವರಗಳನ್ನು ನಮೂದಿಸಿರಬೇಕು ಎಂದರು.
ಸಭೆಯಲ್ಲಿ ಹೆಚ್ಚುವರಿ ಅಧೀಕ್ಷಕ ಸುರೇಶ್, ಉಪ ಲೋಕಾಯುಕ್ತರಾದ ಎಂ.ಆರ್.ಗೌತಮ್, ಸುಧೀರ್, ಇಒ ಪ್ರದೀಪ್, ತಹಶೀಲ್ದಾರ್ ತೇಜಸ್ವಿನಿ ಹಾಗೂ ರಾಮನಗರ ಮತ್ತು ಚನ್ನಪಟ್ಟಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.