ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ದೈತ್ಯ ಪ್ರಾಣಿ ಆನೆಯನ್ನು ಪಳಗಿಸಿ ಭಾವನಾತ್ಮಕ ಸಂಬಂಧ ಬೆಳೆಸುವಂತೆ ಮಾಡುವ ಮಾವುತರು ಮತ್ತು ಕಾವಾಡಿಗರ ಜೀವನ ಭದ್ರತೆಗೆ ಸರ್ಕಾರ ಯೋಜನೆ ರೂಪಿಸಬೇಕಿದೆ ಎಂದು ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಅಧ್ಯಕ್ಷ ಜೆ.ಎಸ್ ನಾಗರಾಜ್ ಅಭಿಪ್ರಾಯಪಟ್ಟರು.
ವಿಶ್ವ ಆನೆ ದಿನಾಚರಣೆ ಅಂಗವಾಗಿ ನಾಗರಹೊಳೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಅವರ ಮಾರ್ಗದರ್ಶನದಲ್ಲಿ ಭೀಮನ ಕಟ್ಟೆ ಸಾಕಾನೆ ಶಿಬಿರದ ಮಾವುತ ಹಾಗೂ ಕಾವಾಡಿಗಳನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಕುಟುಂಬ ವರ್ಗದವರಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು.
ವನ್ಯಜೀವಿಗಳು ಮತ್ತು ಮಾನವನ ಸಂಘರ್ಷದಲ್ಲಿ ಕಾಡಾನೆ ದಾಳಿಯಿಂದಲೇ ಹೆಚ್ಚು ನಷ್ಟ ಉಂಟಾಗುತ್ತಿರುವುದು ಸತ್ಯವಾಗಿದ್ದರೂ ಆನೆಗಳಿಗೆ ಅರಣ್ಯದಲ್ಲಿ ಸರಿಯಾಗಿ ಮೇವು ದೊರಕದ ಕಾರಣ ನಾಡಿನತ್ತ ಬರುತ್ತಿವೆ ಕೆಲ ಸಂದರ್ಭ ಸಾಕಾನೆಗಳು ವಿಚಿತ್ರವಾಗಿ ವರ್ತಿಸಿ ಅತ್ಯಂತ ಪ್ರೀತಿಯಿಂದ ಸಾಕಿದ ಮಾವುತ ಹಾಗೂ ಕಾವಾಡಿಗಳನ್ನು ಬಲಿ ತೆಗೆದುಕೊಂಡಿರುವ ಪ್ರಸಂಗ ನಡೆದಿದ್ದು ಅವರ ಕುಟುಂಬಗಳಿಗೆ ಜೀವನ ಭದ್ರತೆಯಾಗುವಂತಹ ಯೋಜನೆಯನ್ನು ಸರ್ಕಾರ ಪ್ರಕಟಿಸಬೇಕಿದೆ ಅವರಿಗೆ ಅರಣ್ಯ ಇಲಾಖೆ ಸೂಕ್ತ ಜೀವನ ಭದ್ರತೆ ಒದಗಿಸಬೇಕು ಹಾಗೂ ಮೂಲಭೂತ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ರೋಟರಿ ಐಕಾನ್ಸ್ ಕಾರ್ಯದರ್ಶಿ ಬಿ.ಎಸ್ ಪ್ರಸನ್ನ ಕುಮಾರ್ ಮಾತನಾಡಿ ಈಚಿನ ದಿನಗಳಲ್ಲಿ ಕಾಡಾನೆ ಸೇರಿದಂತೆ ಇತರೆ ಕಾಡುಪ್ರಾಣಿಗಳ ದಾಳಿಯಿಂದ ರೈತರಿಗೆ ಅಪಾರ ನಷ್ಟ ಉಂಟಾಗುತ್ತಿದ್ದು ವನ್ಯಜೀವಿಗಳ ಸಂಘರ್ಷ ತಪ್ಪಿಸಿ ರೈತರಿಗೆ ಬೆಳೆ ಹಾನಿಯಾಗದಂತೆ ಆನೆ ಕಂದಕ ಮತ್ತು ಸೋಲಾರ್ ಬೇಲಿಗಳನ್ನು ನಿರ್ಮಿಸಿ ಅವುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಕೆಲಸವಾಗಬೇಕಿದೆ ಎಂದರು.

ಮಾವುತರಾದ ವೆಂಕಟೇಶ್, ಜೆ.ಕೆ ರವಿ ತಮ್ಮ ಅನುಭವ ಹಂಚಿಕೊಂಡು ಮಾತನಾಡಿ ಆನೆಗಳು ದೈತ್ಯ ಪ್ರಾಣಿಗಳಾದರೂ ಭಾವನಾತ್ಮಕವಾಗಿ ಮನುಷ್ಯರೊಂದಿಗೆ ತುಂಬಾ ಚೆನ್ನಾಗಿ ಸ್ಪಂದಿಸುತ್ತವೆ ಅವುಗಳಿಗೆ ಮದವೇರಿದಾಗ ಮಾತ್ರ ನಾವು ಜಾಗೃತರಾಗಿ ಅವುಗಳೊಂದಿಗೆ ವರ್ತಿಸಬೇಕಿದೆ ಎಂದರು.
ಈ ವೇಳೆ ಮಾವುತರಾದ ವೆಂಕಟೇಶ್, ಜೆ.ಕೆ ರವಿ, ಜೆ.ಎಸ್ ತಮ್ಮಯ್ಯ, ಹರೀಶ್ ಕಾವಾಡಿಗಳಾದ ಲವ, ಜೀವನ್, ಮಂಜು, ಗಣೇಶ್, ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು, ಈ ಸಂದರ್ಭ ಸಂಸ್ಥೆಯ ಖಜಾಂಚಿ ಬಿ.ಆರ್ ಗಣೇಶ್ ಪದಾಧಿಕಾರಿಗಳಾದ ಸಿ.ಎನ್ ವಿಜಯ್, ಬಿ.ಎಸ್ ಸತೀಶ್ ಆರಾಧ್ಯ, ರವಿಚಂದ್ರ ಬೂದಿತಿಟ್ಟು, ಡಿ.ಆರ್ ಧನಂಜಯ್, ಪತ್ರಕರ್ತ ಇಮ್ತಿಯಾಜ್ ಅಹಮದ್ ಇದ್ದರು.
