ಬೆಂಗಳೂರು: ಜಯದೇವ ಆಸ್ಪತ್ರೆ ೨೪ ಗಂಟೆ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ಮತ್ತು ಹಣ ಒದಗಿಸಲಾಗುವುದು ಎಂದು ಸಿ.ಎಂ.ಸಿದ್ದರಾಮಯ್ಯ ಘೋಷಿಸಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ನೂತನ ತಾಯಿ-ಮಕ್ಕಳ ಆಸ್ಪತ್ರೆ, ಬೋಧನಾ ಕಟ್ಟಡ, ಶವಾಗಾರ ಕಟ್ಟಡ, ನೂತನ ಮಾದರಿ ಅಡುಗೆ ಮನೆ, ಲಾಂಡ್ರಿ ಕಟ್ಟಡ, ವೈದ್ಯಕೀಯ ಘನ ತ್ಯಾಜ್ಯ ಘಟಕದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲೇ ಜಯದೇವ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುಖ್ಯಮಂತ್ರಿಗಳು, ಇನ್ನು ಮುಂದೆ ದಿನದ ೨೪ ಗಂಟೆ ಜಯದೇವದಲ್ಲಿ ಎಲ್ಲಾ ರೀತಿಯ ಆರೋಗ್ಯ ಸೇವೆ ಒದಗಿಸಬೇಕು. ಇದಕ್ಕೆ ತಕ್ಕ ಸಿದ್ದತೆಗಳನ್ನು ಮಾಡಿಕೊಳ್ಳಿ ಎನ್ನುವ ಸೂಚನೆ ನೀಡಿದರು.
ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆ ವೈದ್ಯರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಸರ್ಕಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಗುಣಮಟ್ಟದಲ್ಲಿರಬೇಕು ಎನ್ನುವುದು ಸರ್ಕಾರದ ಗುರಿ ಎಂದು ನುಡಿದರು. ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟ ಮತ್ತು ಶುಚಿತ್ವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಬರಬೇಕು. ಆಗ ಮಾತ್ರ ಸರ್ಕಾರ ಕೊಡುವ ಅನುದಾನಕ್ಕೆ ಅರ್ಥ ಬರುತ್ತದೆ ಎಂದರು.
ಅಪಘಾತ ವಲಯಗಳ ಹತ್ತಿರದಲ್ಲೇ ಟ್ರಾಮಾ ಸೆಂಟರ್ ಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಗಾಯಾಳುಗಳ ಜೀವ ಉಳಿಸಲು ಗೋಲ್ಡನ್ ಹವರ್ ಬಹಳ ಮುಖ್ಯ ಎನ್ನುವುದನ್ನು ಪರಿಗಣಿಸಿ ಸರ್ಕಾರ ಈ ಕಾರ್ಯಕ್ಕೆ ಮುಂದಾಗಿದೆ ಎಂದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಿಟ್ಟ ಬೇಡಿಕೆಗಳನ್ನು ಅನುಮೋದಿಸಿ ಹಣ ಬಿಡುಗಡೆ ಮಾಡಿದ್ದೇನೆ. ನೂತನ ಆಸ್ಪತ್ರೆ ಕಟ್ಟಡವನ್ನೂ ನಾನೇ ಉದ್ಘಾಟಿಸುತ್ತೇನೆ. ಬೇಗ ಕೆಲಸ ಮುಗಿಸಿ ಎಂದು ಸಚಿವರಿಗೆ ಸೂಚನೆ ನೀಡಿದರು. ರೋಗಿಗಳ ಸಮಸ್ಯೆಗಳನ್ನು ಸಂಯಮದಿಂದ ಕೇಳಿಸಿಕೊಂಡರೆ ಅರ್ಧ ಕಾಯಿಲೆ ಗುಣಮುಖವಾಗುತ್ತದೆ ಎಂದರು.
ಜನವರಿ ೨೨ ರಂದು ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ಬೇಡಿಕೆಗಳ ಈಡೇರಿಸಿ ಅಗತ್ಯ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದು ಇಂದು ಭೂಮಿಪೂಜೆ ನೆರವೇರಿಸಿದರು.