Tuesday, April 22, 2025
Google search engine

Homeರಾಜ್ಯಸುದ್ದಿಜಾಲಸರಕಾರದ ಜನಪರ ಗ್ಯಾರಂಟಿ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಿದ ಸರಕಾರಿ ನೌಕರರಿಗೆ ಕೃತಜ್ಞತೆಗಳು : ಸಚಿವ...

ಸರಕಾರದ ಜನಪರ ಗ್ಯಾರಂಟಿ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಿದ ಸರಕಾರಿ ನೌಕರರಿಗೆ ಕೃತಜ್ಞತೆಗಳು : ಸಚಿವ ಸಂತೋಷ ಲಾಡ

ಧಾರವಾಡ : ರಾಜ್ಯ ಸರಕಾರದ ಜನಪರ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಹಕಾರ ನೀಡಿ, ಶ್ರಮಿಸಿದ ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ರಾಜ್ಯ ಸರಕಾರದ ಪರವಾಗಿ ಧನ್ಯವಾದಗಳು. ಆಡಳಿತ ವ್ಯವಸ್ಥೆಯಲ್ಲಿನ ಲೋಪ, ದೋಷಗಳನ್ನು ಸರಿಪಡಿಸಲು ಸರ್ಕಾರಿ ನೌಕರರ ಸಹಕಾರವು ಅಗತ್ಯವಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಹೇಳಿದರು.

ಅವರು ಇಂದು ಮಧ್ಯಾಹ್ನ ನಗರದ ಗೌರಮ್ಮ ಹಿರೇಮಠ (ರಪಾಟಿ) ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಬೆಂಗಳೂರು ಹಾಗೂ ಧಾರವಾಡ ಜಿಲ್ಲಾ ಘಟಕ ಮತ್ತು ಜಿಲ್ಲಾಡಳಿತದಿಂದ ಆಯೋಜಿಸಿದ್ದ ನೂತನ ಶಾಸಕರ ಮತ್ತು ಸಚಿವರ ಅಭಿನಂದನಾ ಸಮಾರಂಭ ಹಾಗೂ 2022-23 ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಾಮಾನ್ಯಸಭೆ ಉದ್ಘಾಟಿಸಿ, ಮಾತನಾಡಿದರು. ರಾಜ್ಯ ಸರ್ಕಾರವು ರಾಷ್ಟ್ರಕ್ಕೆ ಮಾದರಿಯಾಗುವ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳ್ಳಿಸಿದೆ. ಶಕ್ತಿ ಯೋಜನೆ ಜಾರಿಯಾಗಿದ್ದರಿಂದ ಇಂದು 1.16 ಕೋಟಿ ಜನ ಪ್ರಯಾಣ ಮಾಡುತ್ತಿದ್ದಾರೆ. ಇಂತಹ ಸಾಧನೆಗೆ ಸರ್ವರ ಸಹಕಾರವೂ ಮುಖ್ಯ ಎಂದು ಅವರು ಹೇಳಿದರು.

ಸರಕಾರವು ಅಭಿವೃದ್ಧಿ ಕಾರ್ಯಗಳೊಂದಿಗೆ ಸರಕಾರಿ ನೌಕರರ ಬೇಡಿಕೆ ಈಡೆರಿಸುವ ಬದ್ದವಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರಕಾರ ಕ್ರಮವಹಿಸಲಿದೆ. ಹಸಿವಿನ ಸೂಚಾಂಕದಲ್ಲಿ ನಮ್ಮ ದೇಶ ಕೆಳಗೆ ಬರುತ್ತಿದೆ. ಜಿಡಿಪಿ ಬೆಳವಣಿಗೆ ಕಾಣುತ್ತಿದೆ. ಆದರೆ ಅದು ಸಮಾಜದಲ್ಲಿ ಕಾಣುತ್ತಿಲ್ಲ ಎಂದರು. ಸರಕಾರಿ ನೌಕರರು ಸೇರಿದಂತೆ ಎಲ್ಲರೂ ಬದ್ದತೆ, ಪಾರದರ್ಶಕತೆಯಿಂದ ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದ್ದರಿಂದ ನೌಕರರು ಉದಾರತೆಯಿಂದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ತಿಳಿಸಿದರು.

ನೌಕರ ಸಂಘದ ಜಿಲ್ಲಾ ಘಟಕವು ಸಲ್ಲಿಸಿರುವ ಬೇಡಿಕೆಗಳಿಗೆ ತಾವು ನೆರವು ನೀಡುವುದಾಗಿ ಮತ್ತು ಸಭಾಗಂಣ ನಿರ್ಮಾಣಕ್ಕೆ ಅನುದಾನ ಕಲ್ಪಿಸುವುದಾಗಿ ತಿಳಿಸಿದರು. ಎನ್‍ಪಿಎಸ್ ರದ್ದತಿ ಬಗ್ಗೆ ಸರಕಾರಕ್ಕೆ ತಮ್ಮ ಮನವಿಯನ್ನು ತಲುಪಿಸುವುದಾಗಿ ಸಚಿವರು ಹೇಳಿದರು.ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಮಾಹಿತಿ ಹಕ್ಕು ಅಧಿನಿಯಮ ಮತ್ತು, ಸಿಸಿಎ ನಿಯಮ, ಕೆಸಿಎಸ್ ನಿಯಮ ಸರಕಾರಿ ನೌಕರನ ಕೈಕಾಲುಗಳಿದ್ದಂತೆ. ಇವುಗಳ ಸರಿಯಾದ ತಿಳುವಳಿಕೆ ಇದ್ದರೆ ಮಾತ್ರ, ಉತ್ತಮವಾಗಿ ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಾಗಾರಗಳ ಅಗತ್ಯವಿದೆ ಎಂದು ಅವರು ಹೇಳಿದರು.

ನೌಕರರ ಬೇಡಿಕೆಗಳನ್ನು ಸರಕಾರ ಸಹಾನುಭೂತಿಯಿಂದ ಪರಿಶೀಲಿಸಿ, ಕ್ರಮವಹಿಸಬೇಕು. ಹೊಸ ಪಿಂಚಣಿ ರದ್ದು ಪಡಿಸುವ ಕುರಿತು ಇಂದಿನ ಸರಕಾರದ ಮುಖ್ಯಸ್ಥರು, ಸಚಿವರು ಈ ಹಿಂದೆ ತಮ್ಮ ಸಹಮತ ವ್ಯಕ್ತಪಡಿಸಿ, ಹೇಳಿಕೆ ನೀಡಿದ್ದಾರೆ. ಈಗ ಈಡೆರಿಸುವ ಕೆಲಸ ಆಗಬೇಕು ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ವೇದಿಕೆಯಲ್ಲಿ ಮಾಹಿತಿ ಆಯೋಗದ ಮಾಜಿ ಮಾಹಿತಿ ಆಯುಕ್ತ ಡಾ.ಶೇಖರ ಡಿ.ಸಜ್ಜನರ, ಮಹಾನಗರ ಪಾಲಿಕೆ ಸದಸ್ಯ ಸುರೇಶ ಬೇದ್ರೆ, ನೌಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಹಿರಿಯ ಉಪಾಧ್ಯಕ್ಷರಾದ ಎಮ್.ವ್ಹಿ.ರುದ್ರಪ್ಪ, ಎಸ್.ಬಸವರಾಜು, ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ಹಿರಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ಖಜಾಂಚಿ ರಾಜಶೇಖರ ಬಾಣದ, ನೌಕರಭವನದ ಕಾರ್ಯದರ್ಶಿ ಗಿರೀಶ ಚೌಡಕಿ, ತಾಲೂಕು ಅಧ್ಯಕ್ಷರಾದ ಎ.ಬಿಕೊಪ್ಪದ,ವ್ಹಿ.ಎಪ್. ಚುಳಕಿ, ಡಾ.ಪ್ರಲ್ಹಾದ ಗೆಜ್ಜಿ, ಆರ್.ಎಂ.ಹೊಲ್ತಿಕೋಟಿ,ಎಸ್.ಎನ್. ಅರಳಿಕಟ್ಟಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular