ಬೆಂಗಳೂರು: ನಗರದಲ್ಲಿ ಭಿಕ್ಷಾಟನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ೪೭ ಮಕ್ಕಳನ್ನು ರಕ್ಷಿಸಿ, ೩೬ ಮಂದಿ ಮಹಿಳೆಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಸಿಬಿಯ ಮಹಿಳಾ ಸಂರಕ್ಷಣಾ ದಳ, ವಿಶೇಷ ವಿಚಾರಣ ದಳ, ಪುಲಕೇಶಿ ನಗರ ಉಪ ವಿಭಾಗದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಪುಲಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಾಜಿ ಸರ್ ಇಸ್ಮಾಯಿಲ್ ಸೇಠ್ ಮಸೀದಿ ಬಳಿ ಸೇರಿದಂತೆ ಸುತ್ತಮುತ್ತಲ ಸ್ಥಳಗಳ ಬೀದಿ ಬದಿಯಲ್ಲಿ ಈ ಮಕ್ಕಳು ಭಿಕ್ಷಾಟಣೆಯಲ್ಲಿ ತೊಡಗಿದ್ದರು. ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸಿದ್ದ ೩೭ ಮಹಿಳೆಯರನ್ನು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ. ಭಿಕ್ಷಾಟನೆಯಿಂದ ರಕ್ಷಿಸಿರುವ ೪೭ ಮಂದಿ ಮಕ್ಕಳಲ್ಲಿ ೨೮ ಹುಡುಗಿಯರು ಮತ್ತು ೧೯ ಗಂಡು ಮಕ್ಕಳಿದ್ದು, ಎಲ್ಲರನ್ನೂ ಮಕ್ಕಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ನೀಡಲಾಗಿದೆ.
ರಕ್ಷಣೆಗೊಳಗಾದ ಮಕ್ಕಳಲ್ಲಿ ೬ ಮಕ್ಕಳು ಒಂದು ವರ್ಷದೊಳಗಿನವರು, ೧೨ ಮಕ್ಕಳು ೧ ರಿಂದ ೨ ವರ್ಷದವರು, ಆರು ಮಕ್ಕಳು ೩ರಿಂದ ೬ ವರ್ಷದವರು, ೧೬ ಮಕ್ಕಳು ೬ರಿಂದ ೧೦ ವರ್ಷದವರು, ಏಳು ಮಂದಿ ೧೦ ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಈ ಮಕ್ಕಳನ್ನು ಭಿಕ್ಷಾಟನೆಯಲ್ಲೇ ತೊಡಗಿದ್ದ ಮಹಿಳೆಯರ ಪೈಕಿ ಕರ್ನಾಟಕ, ಆಂಧ್ರಪ್ರದೇಶ, ಉತ್ತರಪ್ರದೇಶದ ಮೂಲದ ಮಹಿಳೆಯರೂ ಇದ್ದಾರೆ. ಬೇರೆ ಮಕ್ಕಳನ್ನು ತಂದು ಭಿಕ್ಷಾಟನೆಗೆ ಬಳಸಿಕೊಂಡಿದ್ದರೆ, ಆ ಮಹಿಳೆಯರ ವಿರುದ್ಧ ಮಾನವ ಕಳ್ಳ ಸಾಗಣೆ ಅಡಿಯಲ್ಲಿ ಪ್ರಕರಣ ದಾಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.