ಮೈಸೂರು: ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿಯ ನಡುವೆಯೂ ಭರ್ಜರಿ ವ್ಯಾಪಾರ ನಡೆಯಿತು. ನಾಳೆ ಆಯುಧ ಪೂಜೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿದರು.
ನಗರದ ಪ್ರಮುಖ ಮಾರುಕಟ್ಟೆಗಳು, ರಸ್ತೆ ಬದಿಗಳಲ್ಲಿ ವ್ಯಾಪಾರಸ್ಥರು ವ್ಯಾಪಾರ ನಡೆಸಿದರು. ಬೆಳಗ್ಗೆ ವ್ಯಾಪಾರ ಜೋರಾಯಿತು. ಹೂ ಮತ್ತು ತರಕಾರಿಗಳ ಬೆಲೆ ಗಗನಕ್ಕೆ ಏರಿದ್ದು ಒಂದು ಮಾರು ಸೇವಂತಿ ಇಂದು ೧೦೦-೧೨೦ ರೂ.ಗೆ ಮಾರಾಟ, ಮಲ್ಲಿಗೆ ೧೦೦-೧೫೦ ರೂ., ಕನಕಂಬಾರ ೧೫೦-೨೦೦ ರೂ.ಗೆ ಬಿಕರಿಯಾಯಿತು. ಇವು ಸೇರಿದಂತೆ ಗುಲಾಬಿ ಮತ್ತಿತರ ಹೂವುಗಳು ಹಬ್ಬದ ಹಿನ್ನೆಲೆಯಲ್ಲಿ ಸಾಮಾನ್ಯ ದಿನದ ಬೆಲೆಗಿಂತ ದುಪ್ಪಟ್ಟಾಗಿದ್ದವು.

ಬಾಳೆ ಹಣ್ಣಿಗೂ ಪ್ರತಿ ಕೆಜಿಗೆ ೧೦-೧೫ ರೂ. ವರೆಗೆ ಏರಿಕೆಯಾಗಿದ್ದು, ೧೦೦ರಿಂದ ೧೨೦ ರೂ.ವರೆಗೆ ಮಾರಾಟವಾಯಿತು. ತರಕಾರಿ ಬೆಲೆ ಹೆಚ್ಚು ಏರಿಕೆಯಾಗದಿದ್ದರಿಂದ ಸಾಮಾನ್ಯರು ನಿಟ್ಟುಸಿರು ಬಿಟ್ಟರು. ಮಾರುಕಟ್ಟೆ ವೃತ್ತಗಳು ಮತ್ತು ರಸ್ತೆ ಬದಿಗಳಲ್ಲಿ ಬೂದುಗುಂಬಳ ಕಾಯಿಯೇ ಆವರಿಸಿಕೊಂಡಿತ್ತು. ಎಲ್ಲೆಲ್ಲಿಯೂ ಬೂದುಗುಂಬಳ ರಾಶಿಯೇ ಕಂಡು ಬಂದಿತ್ತು.
ಕಳೆದ ಎರಡು ಮೂರು ದಿನಗಳ ಹಿಂದೆಯೇ ಕಾಯಿಗಳನ್ನು ಪ್ರಮುಖ ರಸ್ತೆ, ವೃತ್ತಗಳಲ್ಲಿ ತಂದು ಗುಡ್ಡೆ ಹಾಕಿದ್ದ ರೈತರು ಭರ್ಜರಿ ವ್ಯಾಪಾರ ನಡೆಸಿದರು. ಬೂದುಗುಂಬಳ ಪ್ರತಿ ಕೆಜಿಗೆ ೩೦-೪೦ ರೂ. ಮಾರಾಟ ಆಯಿತು. ಇನ್ನೂ ನಿಂಬೆ ಹಣ್ಣು ೧೦ ರೂ.ಗೆ ಎರಡು ಮತ್ತು ಮೂರು ದೊರೆಯಿತು. ವಿಭೂತಿ, ಅರಿಶಿಣ-ಕುಂಕುಮ, ಧೂಪ ಸೇರಿದಂತೆ ಪೂಜಾ ಸಾಮಾಗ್ರಿಗಳು ಸಹ ತುಟ್ಟಿಯಾಗಿದ್ದವು.

ಆಯುಧ ಪೂಜೆಗೆ ಬೇಕಾಗಿರುವ ಬಾಳೆ ಕಂದು, ಮಾವಿನ ಎಲೆಗಳು ಸಹ ನಿಗಧಿತ ಬೆಲೆಗೆ ಮಾರಾಟವಾದವು. ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮತ್ತು ಮಂಡಿ ಮಾರುಕಟ್ಟೆ, ನಂಜು ಮಳಿಗೆ, ಎಂ.ಜಿ.ರಸ್ತೆ ಮಾರುಕಟ್ಟೆ ಸೇರಿದಂತೆ ಧನ್ವಂತ್ರಿ ರಸ್ತೆ, ಆಗ್ರಹಾರ ವೃತ್ತ, ಆರ್‌ಎಂಸಿ, ವಿನೋಭಾ ರಸ್ತೆ, ಸಯ್ಯಾಜಿರಾವ್ ರಸ್ತೆ, ಜೆಕೆ ಮೈದಾನ ಸೇರಿದಂತೆ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವ್ಯಾಪಾರ ನಡೆಯಿತು. ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ಸ್ವೀಟ್ ಅಂಗಡಿಗಳಲ್ಲಿ ಜನಜಂಗುಳಿ ಕಂಡು ಬಂತು. ಸ್ವೀಟ್ ಮಳಿಗೆಗಳು ಸಹ ಭರ್ಜರಿ ವ್ಯಾಪಾರ ವಹಿವಾಟು ನಡೆಸಿದವು. ಗಾರೆ ಕೆಲಸದವರು ಸೇರಿದಂತೆ ಹಲವರು ಬಟ್ಟೆಗಳನ್ನು ಉಡುಗೊರೆ ಕೊಡುವುದರಿಂದ ಬಟ್ಟೆ ಅಂಗಡಿಗಳಲ್ಲೂ ಜನಜಂಗುಳಿ ಇತ್ತು.