Friday, April 4, 2025
Google search engine

Homeರಾಜ್ಯಮಕರ ಸಂಕ್ರಾಂತಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

ಮಕರ ಸಂಕ್ರಾಂತಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

ಬೆಂಗಳೂರು: ನಾಡಿನೆಲ್ಲೆಡೆ ಇಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಜ್ಯಾಜ್ಯಕ್ಷ ಬಿ ವೈ ವಿಜಯೇಂದ್ರ ಅವರು ನಾಡಿನ ಸಮಸ್ತ ಜನರಿಗೆ ಶುಭ ಹಾರೈಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲರಿಗೂ ಸುಗ್ಗಿಯ ಹಬ್ಬವಾದ ಮಾಘಿ, ಬಿಹುವಿನ ಶುಭಾಶಯಗಳು. ನಾವು ಪ್ರಕೃತಿಯ ಸಮೃದ್ಧಿ, ಸುಗ್ಗಿಯ ಸಂತೋಷ ಮತ್ತು ಒಗ್ಗಟ್ಟಿನ ಮನೋಭಾವವನ್ನು ಆಚರಿಸುತ್ತೇವೆ. ಈ ಹಬ್ಬವು ಸಂತೋಷ ಮತ್ತು ಒಗ್ಗಟ್ಟಿನ ಮನೋಭಾವವನ್ನು ಹೆಚ್ಚಿಸಲಿ ಎಂದು ಶುಭ ಕೋರಿದ್ದಾರೆ.

ಋತು ಮನ್ವಂತರದ ಹಬ್ಬವಾದ ಮಕರ ಸಂಕ್ರಾಂತಿಯು ಸರ್ವರ ಕಷ್ಟಗಳನ್ನು ಕಳೆದು, ಸುಖ, ಶಾಂತಿ, ಸಮೃದ್ಧಿಯ ಹೊಸ ದಿಕ್ಕಿನೆಡೆಗೆ ಮುನ್ನಡೆಸಲಿ ಎಂದು ಆಶಿಸುತ್ತೇನೆ. ಎಳ್ಳು- ಬೆಲ್ಲದ ಜೊತೆ ಪ್ರೀತಿ, ಬಾಂಧವ್ಯ ಮಿಳಿತಗೊಳ್ಳಲಿ, ನಾಡಿನಲ್ಲಿ ಸ್ನೇಹ, ಸೌಹಾರ್ದತೆ ಶಾಶ್ವತವಾಗಿ ಮನೆಮಾಡಲಿ. ನಾಡಬಂಧುಗಳಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎಕ್ಸ್ ಮೂಲಕ ಹಬ್ಬಕ್ಕೆ ಶುಭಾಶಯ ಕೋರಿದ ಮಲ್ಲಿಕಾರ್ಜುನ ಖರ್ಗೆ ಅವರು, ಮಕರ ಸಂಕ್ರಾಂತಿ, ಪೊಂಗಲ್, ಸುಗ್ಗಿ ಹಬ್ಬ, ಮಾಘಿ, ಭೋಗಲಿ ಬಿಹು, ಖಿಚಡಿ, ಪೌಷ್ ಪರ್ವ, ಉತ್ತರಾಯಣ ಮತ್ತು ಮಕರವಿಳಕ್ಕು ಹಬ್ಬಗಳು ಪ್ರತಿಯೊಬ್ಬರ ಜೀವನದಲ್ಲಿ ಅಪರಿಮಿತ ಸಂತೋಷ ಮತ್ತು ಅನಿಯಂತ್ರಿತ ಸಮೃದ್ಧಿಯನ್ನು ತರಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ನಾಡಿನ ಸಮಸ್ತರಿಗೂ ಸುಗ್ಗಿ ಹಬ್ಬ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಅನ್ನದಾತನ ಕಷ್ಟಕ್ಕೆ ಹೆಗಲು ನೀಡುವ ರಾಸುಗಳನ್ನು ಪೂಜಿಸುವ ಹಾಗೂ ಕಿಚ್ಚು ಹಾಯಿಸುವ ಮೂಲಕ ಪ್ರಾಣಿಗಳಲ್ಲೂ ದೇವರನ್ನು ಕಾಣುವ ವಿಶೇಷ ಹಬ್ಬವಿದು. ಸುಗ್ಗಿ ಹಬ್ಬವು ನಾಡಿನ ಸಮಸ್ತರಿಗೂ ವಿಶೇಷವಾಗಿ ರೈತ ಬಾಂಧವರ ಬದುಕಿನಲ್ಲಿ ಸುಖ, ಸಂತೋಷ ಹಾಗೂ ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಹಾರೈಸುತ್ತೇನೆ ಎಂದು ಡಿಕೆ ಶಿವಕುಮಾರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ರೈತ ಕಾಯಕದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಸುಗ್ಗಿಯ ಹಬ್ಬವು ನಾಡಿನೆಲ್ಲೆಡೆ ನೆಮ್ಮದಿ ನೆಲೆಸಿ, ಎಲ್ಲರ ಬದುಕಿನಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಹೊತ್ತು ತರಲೆಂದು ಶುಭ ಹಾರೈಸುತ್ತೇನೆ ಎಂದು ಬಿವೈ ವಿಜಯೇoದ್ರ ಅವರು ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ್ದಾರೆ.

RELATED ARTICLES
- Advertisment -
Google search engine

Most Popular