ಬಳ್ಳಾರಿ: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯು ಯಶಸ್ವಿಯಾಗಿ ಜಾರಿಗೊಂಡು ಒಂದು ವರ್ಷ ಪೂರೈಸಿದ್ದು, ಜಿಲ್ಲೆಯಲ್ಲಿ ಈವರೆಗೂ ಬರೋಬ್ಬರಿ 170.08 ಕೋಟಿ ರೂಪಾಯಿಗೂ ಅಧಿಕ ಉಚಿತ ವಿದ್ಯುತ್ ನೀಡಲಾಗಿದೆ. ಜಿಲ್ಲೆಯಲ್ಲಿ 2.80 ಲಕ್ಷ ಗ್ರಾಹಕ ಕುಟುಂಬಗಳು ಈ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ಅರ್ಹ ವಿದ್ಯುತ್ ಗ್ರಾಹಕರು ನೋಂದಾಯಿಸಿಕೊಳ್ಳಲು ಇನ್ನೂ ಅವಕಾಶವಿದೆ.
ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಆರಂಭವಾಗಿ ಒಂದು ವರ್ಷ, ಮೂರು ತಿಂಗಳು ಕಳೆದಿವೆ. ಜಿಲ್ಲೆಯಲ್ಲಿ ಒಟ್ಟಾರೆ 2.80 ಲಕ್ಷ ಕುಟುಂಬಗಳು ನೋಂದಣಿಯಾಗಿ ಯೋಜನೆ ಲಾಭ ಪಡೆದುಕೊಂಡಿವೆ. ಎಲ್ಲಾ ಕುಟುಂಬಗಳಿಗೆ ಶೂನ್ಯ ಬಿಲ್ ಬಂದಿದೆ. ಉಳಿದ ಕುಟುಂಬಗಳ ಉಚಿತ ಅರ್ಹತೆಗಿಂತ ಹೆಚ್ಚು ವಿದ್ಯುತ್ ಬಳಸಿದ್ದಲ್ಲಿ ಹಣ ಪಾವತಿಸಿವೆ.
ರಾಜ್ಯ ಸರ್ಕಾರವು ಚುನಾವಣೆಯಲ್ಲಿ ನೀಡಿದ ಆಶ್ವಾಸನೆಯಂತೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ಯೋಜನೆಯನ್ನು 2023 ಆಗಸ್ಟ್ನಿಂದ ಆರಂಭಿಸಿತು. ಕಳೆದ ವರ್ಷ ಜೂನ್ 18 ರಿಂದ ನೋಂದಣಿ ಅವಕಾಶ ನೀಡಿತ್ತು.
ಎಷ್ಟು ಯೂನಿಟ್ ಉಚಿತ: ಗೃಹ ವಿದ್ಯುತ್ ಗ್ರಾಹಕರು ಕಳೆದ ಒಂದು ವರ್ಷದಲ್ಲಿ ಮಾಸಿಕ ಬಳಸಿದ ಸರಾಸರಿ ಯೂನಿಟ್‌ಗೆ ಶೇಕಡಾ 10 ರಷ್ಟು ಹೆಚ್ಚುವರಿ ಯೂನಿಟ್ ಉಚಿತವಾಗಿರುತ್ತದೆ. ಅದಕ್ಕಿಂತ ಹೆಚ್ಚು ಬಳಸುವ ವಿದ್ಯುತ್‌ಗೆ ದರ ಪಾವತಿಸಬೇಕಾಗುತ್ತದೆ.
ಗೃಹಜ್ಯೋತಿ ಯೋಜನೆ ಅಂಕಿ ಅಂಶಗಳು: ಜಿಲ್ಲೆಯಲ್ಲಿ ಒಟ್ಟು 3,02892 ಅರ್ಹ ಗ್ರಾಹಕರಿದ್ದು, ಅದರಲ್ಲಿ ಈವರೆಗೆ (ಅ.31 ರ ವರೆಗೆ) 2,80,282 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. 22,610 ಗ್ರಾಹಕರು ನೋಂದಾತಯಿಸಲು ಬಾಕಿಯಿದ್ದಾರೆ. ಸರ್ಕಾರವು 2023ರ ಆಗಸ್ಟ್ನಿಂದ 2024ರ ಅಕ್ಟೋಬರ್ ವರೆಗೆ ಒಟ್ಟು 170.08 ಕೋಟಿ ರೂ. ಪಾವತಿಸಿದೆ.
ತಾಲ್ಲೂಕುವಾರು ನೋಂದಾಯಿಸಿಕೊoಡ ಗ್ರಾಹಕರ ಮಾಹಿತಿ:
ಬಳ್ಳಾರಿ: 1,50,450
ಕಂಪ್ಲಿ: 14,783
ಕುರುಗೋಡು: 19,151
ಸಂಡೂರು: 49,043
ಸಿರುಗುಪ್ಪ: 2763
ನೋಂದಾಯಿಸಲು ಬಾಕಿ ಇರುವ ಗ್ರಾಹಕರು:
ಬಳ್ಳಾರಿ: 14,435
ಕಂಪ್ಲಿ: 312
ಕುರುಗೋಡು: 1,425
ಸಂಡೂರು: 3,675
ಸಿರುಗುಪ್ಪ: 2,763
ಇಂದಿಗೂ ನೋಂದಣಿ ಅವಕಾಶ: ಇಂದಿಗೂ ಗೃಹಜ್ಯೋತಿ ಯೋಜನೆಯ ನೋಂದಣಿಗೆ ಅವಕಾಶವಿದೆ. ಮನೆ ಬದಲಾವಣೆ ಮಾಡಿಕೊಳ್ಳುವವರು, ಹೊಸ ಮನೆ ಕಟ್ಟುವವರು ಕೂಡ ನೋಂದಣಿ ಮಾಡಿಕೊಳ್ಳಬಹುದು. ಅವರಿಗೆ ನಿಯಮಗಳಂತೆ ನಿಗದಿತ ಯೂನಿಟ್‌ಗಳು ಮಾತ್ರ ಉಚಿತ ಇರುತ್ತವೆ.
ಈ ವರ್ಷದ ಆಗಸ್ಟ್ ತಿಂಗಳಿಗೆ ಗೃಹಜ್ಯೋತಿಗೆ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಇಂಧನ ಇಲಾಖೆಯು ಬಾಡಿಗೆ ಮನೆ ಅಥವಾ ಯಾವುದೇ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಖಾತೆ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊAದಿಗೆ ನೋಂದಣಿಯಾಗಿ, ಗೃಹ ಜ್ಯೋತಿಯ ಲಾಭ ಪಡೆಯಬಹುದು ಎಂದು ತಿಳಿಸಿದೆ.
ಡಿ-ಲಿಂಕ್ ಮಾಡುವುದು ಹೇಗೆ?: ಗ್ರಾಹಕರು ಆನ್‌ಲೈನ್ https://sevasindhu.karnataka.gov.in/…/GetAadhaarData.aspx ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ. ಮನೆ ಬದಲಿಸುವ ಸಂದರ್ಭದಲ್ಲಿ ಆಧಾರ್ ಸಂಖ್ಯೆ ಜೊತೆ ಲಿಂಕ್ ಆಗಿರುವ ಆರ್‌ಆರ್ ನಂಬರ್‌ನ ವಿವರ ಪರಿಶೀಲಿಸಿ ಡಿ-ಲಿಂಕ್ ಮಾಡಬಹುದು. ಹೊಸ ಮನೆಗೆ ಗೃಹಜ್ಯೋತಿ ಪಡೆಯಲು ಯಾವುದೇ ಆಧಾರ್ ಜೊತೆ ಲಿಂಕ್ ಆಗಿರದ ಆರ್‌ಆರ್ ನಂಬರ್‌ಗೆ ಲಿಂಕ್ ಮಾಡಬಹುದು. ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ-ಲಿಂಕ್ ಮಾಡಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ನಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, 500 ರಿಂದ 600 ರೂ. ವರೆಗೆ ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದೆವು. ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾದ ಬಳಿಕ ಕಳೆದ ಒಂದು ವರ್ಷದಿಂದ ಶೂನ್ಯ ಮೊತ್ತದ ವಿದ್ಯುತ್ ಬಿಲ್ ಪಾವತಿಮಾಡುತ್ತಿದ್ದೇವೆ.
– ನುಂಕೇಶ್.ಹೆಚ್, ಸಂಡೂರು ಪಟ್ಟಣ.
ಗೃಹ ಜ್ಯೋತಿ ನೋಂದಣಿಗೂ ಮುನ್ನ 1000 ರಿಂದ 1200 ರೂ. ಅಸುಪಾಸು ವಿದ್ಯುತ್ ಬಿಲ್ ಪಾವತಿಸುತ್ತಿದ್ದೆ. ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆಯಡಿ ಈಗ ಸೊನ್ನೆ ಮೊತ್ತದ ಬಿಲ್ ಬರುತ್ತಿದೆ. ಒಮ್ಮೊಮ್ಮೆ 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದಲ್ಲಿ ಕೇವಲ 150 ರಿಂದ 200 ರೂ. ಬಿಲ್ ಬರುತ್ತಿದೆ. ಮುಂಚೆ ಬರುತ್ತಿದ್ದ ಬಿಲ್‌ಗಿಂತ ಕಡಿಮೆ ಹಣ ಪಾವತಿಸುತ್ತಿದ್ದು, ಉಳಿತಾಯದ ಹಣವನ್ನು ದಿನಸಿ-ಸಾಮಾನುಗಳಿಗೆ ವ್ಯಯಿಸುತ್ತಿದ್ದೇನೆ. ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ತುಂಬಾ ಅನುಕೂಲವಾಗುತ್ತಿದೆ.
– ಲಕ್ಷಣ.ಎಸ್ ಭಂಡಾರಿ, ಅಂಬೇಡ್ಕರ್ ನಗರ ನಿವಾಸಿ, ಬಳ್ಳಾರಿ.