Thursday, December 25, 2025
Google search engine

Homeರಾಜ್ಯಗೃಹಲಕ್ಷ್ಮಿ ಹಣ ಎಲ್ಲಿಯೂ ಹೋಗಿಲ್ಲ: ಸತೀಶ್‌ ಜಾರಕಿಹೊಳಿ

ಗೃಹಲಕ್ಷ್ಮಿ ಹಣ ಎಲ್ಲಿಯೂ ಹೋಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂಬ ಆತಂಕಕ್ಕೆ ಸಚಿವರು ತೆರೆ ಎಳೆದಿದ್ದು, ಆ ಎರಡು ತಿಂಗಳ ಹಣ ಎಲ್ಲಿಯೂ ಹೋಗಿಲ್ಲ, ದುರ್ಬಳಕೆಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಗುರುವಾರ ಮಾತನಾಡಿವ ಸತೀಶ್‌ ಜಾರಕಿಹೊಳಿ ಅವರು, 5000 ಕೋಟಿ ರೂಪಾಯಿ ಹಣ ಎಲ್ಲಾದರೂ ನಾಪತ್ತೆಯಾದರೆ ಆದಾಯ ತೆರಿಗೆ ಇಲಾಖೆಯವರು ಸುಮ್ಮನೆ ಬಿಡುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಮೂಲಕ ಬಿಜೆಪಿಯ ಹಣ ದುರ್ಬಳಕೆ ಆರೋಪವನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಹಣಕಾಸು ಇಲಾಖೆ ಹಾಗೂ ಸಂಬಂಧಪಟ್ಟ ಮಂತ್ರಿಗಳು ಶೀಘ್ರವೇ ಸ್ಪಷ್ಟೀಕರಣ ನೀಡಲಿದ್ದಾರೆ ಎಂದರು.

ಅಲ್ಲದೆ, ಮುಂದಿನ ತಿಂಗಳುಗಳ ಹಣ ಬಿಡುಗಡೆಯಾಗುವ ಸಂದರ್ಭದಲ್ಲಿ ಬಾಕಿ ಇರುವ ಹಿಂದಿನ ಎರಡು ತಿಂಗಳ ಹಣ ಬಂದೇ ಬರುತ್ತದೆ. ಕೇವಲ ತಾಂತ್ರಿಕ ವ್ಯತ್ಯಾಸ ಆಗಿರಬಹುದು ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದೊಳಗಿನ ಪವರ್‌ ಶೇರಿಂಗ್‌ ಮತ್ತು ಆಂತರಿಕ ಗೊಂದಲದ ಬಗ್ಗೆ ಸತೀಶ್ ಜಾರಕಿಹೊಳಿ ಮಾತನಾಡಿ, ಆಂತರಿಕ ಗೊಂದಲಗಳ್ನು ನೀವು ನೀವೇ ಬಗೆಹರಿಸಿಕೊಳ್ಳಿ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಆದರೆ ಆ ಮಾತು ನಮಗಲ್ಲ, ಅದು ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಹೈಕಮಾಂಡ್ ಅವರಿಗೆ ಹೇಳಿರೋದು ಎಂದು ಮಾರ್ಮಿಕವಾಗಿ ನುಡಿದರು.

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಹೈಕಮಾಂಡ್‌ಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಗಿರುವುದು ಆಗಿಹೋಗಿದೆ, ಈಗ ನಾವು ಮುಂದೇನು ಎಂಬುದನ್ನು ನೋಡಬೇಕು ಎಂದರು. ಮುಂದಿನ 2028 ರ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ಬಿಎಲ್‌ಎಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ಅದರ ಬಗ್ಗೆ ನಾವು ಈಗಿನಿಂದಲೇ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಕಾರ್ಯಕರ್ತರಿಗೆ ಹಾಗೂ ಪಕ್ಷದ ನಾಯಕರಿಗೆ ಸಲಹೆ ನೀಡಿದರು.

ಜನವರಿ 25 ರಂದು ನಡೆಯಲಿರುವ ಅಹಿಂದ ಸಮಾವೇಶದ ಬಗ್ಗೆ ಮಾತನಾಡಿದ ಅವರು, ಅಹಿಂದ ಎನ್ನುವುದು ನಮ್ಮ ಶಕ್ತಿ. ಇದನ್ನು ಮಾಡಲು ನಮಗೆ ಯಾರ ಸರ್ಟಿಫಿಕೇಟ್ ಬೇಕಿಲ್ಲ. ಸಮಾವೇಶ ಯಾರೇ ಮಾಡಿದರೂ ನಮ್ಮ ಅಭ್ಯಂತರವಿಲ್ಲ. ಹೊಸ ಹೊಸ ಪ್ರಾಡಕ್ಟ್‌ಗಳು ರಾಜಕಾರಣದಲ್ಲಿ ಬರುತ್ತಿರಬೇಕು ಎಂದು ತಿಳಿಸಿದರು.

ಹಿಂದೆ ಚಿತ್ರದುರ್ಗದಲ್ಲಿ ನಡೆದ ಅಹಿಂದ ಸಮಾವೇಶವೇ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿತ್ತು ಎಂಬುದನ್ನು ನೆನಪಿಸಿದ ಅವರು, “ದಲಿತ ಸಮಾವೇಶಗಳನ್ನು ನಾವೇ ಮಾಡಬೇಕು ಅಂತೇನಿಲ್ಲ, ಯಾರು ಬೇಕಾದರೂ ಮಾಡಬಹುದು. ಇದು ಮುಂದಿನ ಚುನಾವಣೆಗೂ ಪಕ್ಷಕ್ಕೆ ಅನುಕೂಲವಾಗುತ್ತದೆ” ಎಂದರು

RELATED ARTICLES
- Advertisment -
Google search engine

Most Popular