Monday, April 21, 2025
Google search engine

Homeಅಪರಾಧಮದುವೆ ಆಮಂತ್ರಣದಲ್ಲಿ ಉಡುಗೊರೆ ಬದಲು ಮೋದಿಗೆ ವೋಟ್ ಕೇಳಿದ್ದ ವರ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮದುವೆ ಆಮಂತ್ರಣದಲ್ಲಿ ಉಡುಗೊರೆ ಬದಲು ಮೋದಿಗೆ ವೋಟ್ ಕೇಳಿದ್ದ ವರ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು (ದಕ್ಷಿಣ ಕನ್ನಡ): ಮದ್ವೆ ಆಮಂತ್ರಣ ಪತ್ರದಲ್ಲಿ ಈ ಬಾರಿಯೂ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದೇ ವಧುವರರಿಗೆ ನೀಡುವ ಉಡುಗೊರೆ. ಯಾಕೆಂದರೆ ನಮ್ಮ ಭವಿಷ್ಯದ ಭಾರತ ಸುಭದ್ರವಾಗಿರಬೇಕು ಎಂದು ಮುದ್ರಿಸಿರುವುದಕ್ಕೆ ವರನ ವಿರುದ್ಧ ಚುನಾವಣಾ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ನೀಡಿದ ದೂರಿನಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಬ ತಾಲೂಕು ಆಲಂತಾಯ ಗ್ರಾಮದ ಶಿವಪ್ರಸಾದ್ ಯಾನೆ ರವಿ ಎಂಬಾತನ ವಿವಾಹವು ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಕೊಳಂಬೆ ಬಾಬು ಗೌಡರ ಪುತ್ರಿ ಪ್ರಮೀಳಾರೊಂದಿಗೆ ಎಪ್ರಿಲ್ ೧೮ ರಂದು ಗೋಳಿತೊಟ್ಟು ಸಿದ್ಧಿ ವಿನಾಯಕ ಕಲಾ ಮಂದಿರದಲ್ಲಿ ಜರಗಿತ್ತು. ವಿವಾಹದ ಅಂಗವಾಗಿ ಸಿದ್ಧಪಡಿಸಲಾದ ಆಮಂತ್ರಣ ಪತ್ರವನ್ನು ಮಾರ್ಚ್೧ ರಂದು ಮುದ್ರಿಸಲಾಗಿದ್ದು, ಸದ್ರಿ ಆಮಂತ್ರಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವುದೇ ನೀವು ನಮಗೆ ನೀಡುವ ಉಡುಗೊರೆ ಎಂದು ಶಿವಪ್ರಸಾದ್ ಉಲ್ಲೇಖಿಸಿದ್ದನು.

ಈ ಬಗ್ಗೆ ಮಾಹಿತಿ ಪಡೆದುಕೊಂಡ ಚುನಾವಾಣಾ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ಎಪ್ರಿಲ್ ೧೪ ರಂದು ವರನ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ, ತಾನು ಮಾರ್ಚ್ ೧ ರಂದೇ ೮೦೦ ಆಮಂತ್ರಣ ಪತ್ರವನ್ನು ಮುದ್ರಿಸಿದ್ದು, ಅದರಲ್ಲಿ ಹತ್ತು ಆಮಂತ್ರಣ ಪತ್ರ ಹೊರತುಪಡಿಸಿ ಎಲ್ಲವನ್ನೂ ಹಂಚಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನಾ ಆಮಂತ್ರಣ ಪತ್ರವನ್ನು ಮುದ್ರಿಸಿ, ವಿತರಿಸಲಾಗಿದ್ದು ತನ್ನ ಕೃತ್ಯ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲ. ಪ್ರಧಾನಿ ಮೋದಿಯ ಮೇಲಿನ ಪ್ರೀತಿ ಹಾಗೂ ರಾಷ್ಟ್ರದ ಮೇಲಿನ ಕಾಳಜಿಯಿಂದ ಇದನ್ನು ಉಲೇಖಿಸಲಾಗಿದೆಯೇ ವಿನಹ ಕಾನೂನನ್ನು ಉಲ್ಲಂಘಿಸುವ ಉದ್ದೇಶ ಹೊಂದಿಲ್ಲ. ಈ ಕಾರಣಕ್ಕೆ ಇದನ್ನು ಅಪರಾಧ ವೆಂದು ಪರಿಗಣಿಸಬಾರದು ಹಾಗೂ ಯಾವುದೇ ಕಾನೂನು ಕ್ರಮವನ್ನು ಕೈಗೊಳ್ಳಬಾರದೆಂದು ಲಿಖಿತ ಹೇಳಿಕೆಯನ್ನು ನೀಡಿದ್ದರು.

ಬಳಿಕ ಎಪ್ರಿಲ್ ೧೮ ರಂದು ವಿವಾಹ ನೆರವೇರಿದ್ದು, ಎಪ್ರಿಲ್ ೨೬ರ ಚುನಾವಣೆಯು ಮುಗಿದ ಬಳಿಕ ಅಧಿಕಾರಿಗಳು ಪೊಲೀಸ್ ಇಲಾಖೆಗೆ ದೂರು ನೀಡಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿದ ಸಂಸ್ಥೆಯ ಮಾಲಕರನ್ನು ಕರೆಯಿಸಿ ಮಹಜರು ಪ್ರಕ್ರಿಯೆಯನ್ನು ನಡೆಸಲಾಯಿತು.

RELATED ARTICLES
- Advertisment -
Google search engine

Most Popular