Monday, April 21, 2025
Google search engine

Homeಸ್ಥಳೀಯಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಜಿಟಿಡಿ

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಜಿಟಿಡಿ

ಮೈಸೂರು: ನಗರದ ಹೊರವಲಯದಲ್ಲಿರುವ ಬಡಾವಣೆಗಳಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಲು ಅಂದಾಜು ೨ ಸಾವಿರ ಕೋಟಿ ರೂ.ಅನುದಾನ ಬೇಕಾಗಿದ್ದು, ನಿವಾಸಿಗಳಿಗೆ ಖಾತೆ ಮಾಡಿ ಕಂದಾಯ ಸಂಗ್ರಹಿಸಿ ಬಡಾವಣೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು. ಖಾತೆ ಮಾಡಿಕೊಡುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ನಗರದ ಬೋಗಾದಿ ಪಟ್ಟಣ ಪಂಚಾಯಿತಿ ಕಚೇರಿಗೆ ಸೋಮವಾರ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದ ಬಳಿಕ ಮಾತನಾಡಿದ ಅವರು, ಕ್ಷೇತ್ರದ ವ್ಯಾಪ್ತಿಯಲ್ಲಿ ೨೭೫ ಖಾಸಗಿ ಬಡಾವಣೆಗಳಿವೆ. ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಿದ ಬಳಿಕ ಮುಡಾದವರು ಎನ್‌ಒಸಿ ಕೊಡುವ ಬದಲಿಗೆ ನಿವೇಶನಗಳನ್ನು ಹಸ್ತಾಂತರ ಮಾಡಿದ್ದಾರೆ. ನನಗೆ ಇರುವ ಮಾಹಿತಿಯಂತೆ ೨೭೫ ಬಡಾವಣೆಗಳ ಪೈಕಿ ೧೦೦ರಲ್ಲಿ ಕನಿಷ್ಠ ಮೂಲ ಸೌಕರ್ಯದ ಕಾಮಗಾರಿ ಮಾಡಲಾಗಿದೆ. ಉಳಿದ ೧೭೫ ಬಡಾವಣೆಗಳಲ್ಲಿ ಕನಿಷ್ಠ ಸೌಲಭ್ಯವನ್ನೂ ಒದಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಡಾದವರು ಎನ್‌ಒಸಿ ಕೊಡದೆ ನಿವೇಶನಗಳನ್ನು ಬಿಡುಗಡೆ ಮಾಡದೆ ಇದ್ದರೆ ಮಾಲೀಕರು ಪೂರೈಸುತ್ತಿದ್ದರು. ಇದೀಗ ಈ ಎಲ್ಲಾ ಬಡಾವಣೆಗಳನ್ನು ಅಭಿವೃದ್ಧಿಪಡಿಸಬೇಕಾದರೆ ಎರಡು ಸಾವಿರ ಕೋಟಿ ರೂ.ಬೇಕಾಗುತ್ತದೆ. ಈ ಅನುದಾನವನ್ನು ಸರ್ಕಾರ ಕೊಡುವುದಿಲ್ಲ. ಮೂಲ ಸೌಕರ್ಯ ಕುರಿತು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿಗಳು ಮೈಸೂರು ಜಿಲ್ಲೆಯವರೇ ಆಗಿರುವ ಕಾರಣ ಮತ್ತೊಮ್ಮೆ ಮನವಿ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಡ ಹೇರುವೆ ಎಂದು ನುಡಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಬಡಾವಣೆಗಳಾದ ಎಸ್‌ಬಿಎಂ ಲೇಔಟ್, ಆಶ್ರಯ ಬಡಾವಣೆ, ಬೋಗಾದಿ, ಹಳ್ಳಿ ಬೋಗಾದಿ ಮೊದಲಾದ ಬಡಾವಣೆಗಳಿಗೆ ಸಾಕಷ್ಟು ಕೆಲಸಗಳಾಗಬೇಕಿದೆ. ಹಾಗಾಗಿ, ಈ ಬಡಾವಣೆಗಳ ನಿವಾಸಿಗಳಿಗೆ ಖಾತೆ ಮಾಡಿಕೊಟ್ಟು ಕಂದಾಯ ಸಂಗ್ರಹಿಸಿ ಅದರಿಂದ ಬರುವ ಆದಾಯದಿಂದ ಅಭಿವೃದ್ಧಿ ಕಾರ್ಯ ಮಾಡುವುದೇ ಈಗ ಉಳಿದಿರುವ ಪರಿಹಾರ ಮಾರ್ಗವಾಗಿದೆ ಎಂದರು.
ಬೋಗಾದಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ವಿರುದ್ಧ ಬಡಾವಣೆಗಳ ನಿವಾಸಿಗಳು ದೂರು ನೀಡಿದ್ದರು.

ನಾನು ಕೂಡ ಸರ್ಕಾರಕ್ಕೆ ಮತ್ತು ನಗರಾಭಿವೃದ್ಧಿ ಸಚಿವರಿಗೆ ಅನುಭವವುಳ್ಳ ಅಧಿಕಾರಿ ನೇಮಕ ಮಾಡಬೇಕೆಂದು ಮನವಿ ಮಾಡಿದ್ದೆ. ಆದರೆ, ಈ ಸರ್ಕಾರ ಶಾಸಕರ ಮನವಿಗೆ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಸಂಪೂರ್ಣ ಮಾಹಿತಿ ಇದೆ. ಬೆಂಗಳೂರಿನಲ್ಲಿ ಕಂದಾಯ ಜಮೀನಿಗೆ ಖಾತೆ ಮಾಡಿಕೊಡಲಾಗುತ್ತದೆ. ಅದೇ ರೀತಿ ಇಲ್ಲಿಯೂ ಖಾತೆ ಮಾಡಿಕೊಡಲು ಸರ್ಕಾರದಿಂದ ಆದೇಶ ಹೊರಡಿಸಿದರೆ ಅನುಕೂಲವಾಗಲಿದೆ ಎಂದರು.
ಅಹವಾಲುಗಳ ಸುರಿಮಳೆ: ಇದಕ್ಕೂ ಮೊದಲು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ನಿವಾಸಿಗಳಿಂದ ಅಹವಾಲುಗಳ ಸುರಿಮಳೆಯಾಯಿತು. ಕುಡಿಯುವ ನೀರು ಸಮರ್ಪಕವಾಗಿ ನೀಡದೆ ಇರುವ ಜತೆಗೆ ವಿದ್ಯುತ್ ದೀಪಗಳ ಸಮಸ್ಯೆಯಾಗಿದೆ. ಪ್ರತಿನಿತ್ಯ ಘನತ್ಯಾಜ್ಯ ಸಂಗ್ರಹಿಸದೆ ಇರುವ ಕಾರಣ ಸಾರ್ವಜನಿಕರು ರಸ್ತೆಬದಿಯಲ್ಲಿ ಸುರಿಯುವಂತಾಗಿದೆ ಎಂದು ದೂರಿದರು. ಕಸವಿಲೇವಾರಿ ಬಗ್ಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ರಸ್ತೆಗಳು ಸರಿಯಾಗಿ ಇಲ್ಲದೆ ರಾತ್ರಿ ಹೊತ್ತು ಸಂಚರಿಸುವ ವಾಹನಗಳು ಅಪಘಾತಕ್ಕೀಡಾಗಿ ಸವಾರರು ಗಾಯಗೊಳ್ಳುತ್ತಿದ್ದಾರೆ. ತಕ್ಷಣವೇ ರಸ್ತೆಗಳಿಗೆ ಡಾಂಬರೀಕರಣ ಮಾಡಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಮುಖ್ಯಾಧಿಕಾರಿ ಜಗರೆಡ್ಡಿ, ಕಂದಾಯ ನಿರೀಕ್ಷಕ ಹರ್ಷಕುಮಾರ್ ಮೊದಲಾದವರು ಇದ್ದರು.

RELATED ARTICLES
- Advertisment -
Google search engine

Most Popular