ಚಿತ್ರದುರ್ಗ: ಚುನಾವಣೆ ಸಂದರ್ಭದಲ್ಲಿ ಜನರಿಗೆ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನಗಳನ್ನು ಜಾರಿ ಮಾಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿತ್ತು. ವಿರೋಧ ಪಕ್ಷಗಳು ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದು ಸಾಧ್ಯವಿಲ್ಲ. ಒಂದು ವೇಳೆ ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕೆ ಮಾಡುವುದರೊಂದಿಗೆ, ಕುಹಕದ ಮಾತುಗಳನ್ನು ಆಡಿದ್ದವು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ, ಕೊಟ್ಟ ಮಾತಿನಂತೆ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿ, ಟೀಕೆ ಟಿಪ್ಪಣಿ ಹಾಗೂ ಕುಹಕಗಳಿಗೆ ತಕ್ಕ ಉತ್ತರ ನೀಡಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಿತ್ರದುರ್ಗ ತಾಲ್ಲೂಕು ತುರುವನೂರು ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಆಯೋಜಿಸಲಾದ ಹೋಬಳಿ ಮಟ್ಟದ ಪಂಚ ಗ್ಯಾರಂಟಿ ಯೋಜನಗಳ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿಲ್ಲ. ಮತ್ತಷ್ಟು ಬಲಿಷ್ಠವಾಗಿದೆ. ಈ ಬಾರಿ ಬಜೆಟ್‍ನ ಸುಮಾರು ರೂ.50 ಸಾವಿರ ಕೋಟಿಗೂ ಅಧಿಕ ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಮೀಸಲು ಇರಿಸಲಾಗಿದೆ. ಕಳೆದ ಜೂನ್ 21 ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಇದರಿಂದ ರಾಜ್ಯದ ಎಲ್ಲಾ ವರ್ಗದ ಮಹಿಳೆಯರು ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣ ಮಾಡುವ ಅವಕಾಶ ಲಭಿಸಿದೆ. ದೇಶದಲ್ಲೇ ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಅನ್ನಭಾಗ್ಯ ಯೋಜನೆ ಜಾರಿ ಮಾಡಿ, ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೂ 5 ಕೆ.ಜಿ. ಉಚಿತ ಅಕ್ಕಿಯನ್ನು ನೀಡಿದರು. ಕಳೆದ ಬಾರಿ ನಮ್ಮ ಸರ್ಕಾರ ಇದ್ದಂತಹÀ ಅವಧಿಯಲ್ಲಿಯೇ 5 ಕೆ.ಜಿ. ಅಕ್ಕಿ ಪ್ರಮಾಣವನ್ನು 7 ಕೆ.ಜಿ.ಗೆ ಏರಿಸಲಾಗಿತ್ತು. ಆದರೆ ನಂತರ ಬಂದ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವ ಚಿಂತನೆ ನಡೆಸಿತ್ತು. ದೇಶ ಕೋವಿಡ್ ಮಹಾಮಾರಿಗೆ ಸಿಲುಕಿದ್ದರಿಂದ ಯೋಜನೆಯನ್ನು ಮುಂದುವರಿಸಲಾಯಿತು. ಬಡವರಿಗೆ ಅನ್ನಭಾಗ್ಯ, ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಸಂಜೀವಿನಿ ಆಯಿತು. ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆಗೆ ಕೇಂದ್ರಕ್ಕೆ ಅಕ್ಕಿ ನೀಡಲು ಕೋರಿದಾಗ ಮನವಿಯನ್ನು ತಿರಸ್ಕರಿಸಲಾಯಿತು. ಹೀಗಾಗಿ ನಮ್ಮ ಸರ್ಕಾರ ಆಹಾರ ಧಾನ್ಯಕ್ಕೆ ಪ್ರತಿಯಾಗಿ ಪ್ರತಿ ತಿಂಗಳು ಪ್ರತಿ ಸದಸ್ಯರಿಗೆ ರೂ.170 ಮೊತ್ತವನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ನಿರ್ಧಾರ ಕೈಗೊಂಡು ಅದನ್ನು ಪಾಲಿಸಿಕೊಂಡು ಬರುತ್ತಿದ್ದೇವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಚುನಾವಣೆ ಸಂದರ್ಭದಲ್ಲಿ ನೀಡುತ್ತಿದ್ದ ಆಶ್ವಾಸನೆಗಳನ್ನು ಈಡೇರಿಸುವ ಬದ್ದತೆಗೆ ಹೊಸ ರೂಪವಾಗಿ ಗ್ಯಾರಂಟಿ ಎಂಬ ಮಾತು ಪ್ರಚಲಿತವಾಗಿದೆ. ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುಗಳಿಗೆ ತಯಾರಕರು ಗ್ಯಾರಂಟಿ ಅವಧಿಯ ಕಾರ್ಡುಗಳನ್ನು ನೀಡುತ್ತಾರೆ. ಅದೇ ರೀತಿ ಸರ್ಕಾರವು ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸುವ ಬದ್ದತೆ ತೋರಬೇಕು. ತುರುವನೂರು ಹೋಬಳಿಯಲ್ಲಿ ಶೇ.95 ರಷ್ಟು ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ. ದಾಖಲೆಗಳ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದ ಹಲವು ಜನರ ಅರ್ಜಿಗಳಲ್ಲಿ ತೊಂದರೆ ಉಂಟಾಗಿದೆ. ಇದನ್ನು ಸಹ ಸರಿಪಡಿಸಿ 100ಕ್ಕೆ 100 ರಷ್ಟು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಶಾಸಕ ಟಿ.ರಘುಮೂರ್ತಿ ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಜಿ.ಪಂ. ಮಾಜಿ ಸದಸ್ಯ ಬಾಬುರೆಡ್ಡಿ, ತಾ.ಪಂ. ಇ.ಓ. ಅನಂತರಾಜು, ತುರುವನೂರು ಗ್ರಾ.ಪಂ. ಅಧ್ಯಕ್ಷೆ ದೀಪಾ.ಪಿ ಮಹೇಶ್, ಬೆಳಗಟ್ಟ ಗ್ರಾ.ಪಂ. ಅಧ್ಯಕ್ಷೆ ಮಂಜುಶ್ರೀ ಪಾಲಯ್ಯ, ಕೂನಬೇವು ಗ್ರಾ.ಪಂ. ಅಧ್ಯಕ್ಷ ಜಿ.ಪಿ. ಅನಿಲ್ ಕುಮಾರ್, ಮಾದನಾಯಕನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಕವಿತಾ ನಾಗರಾಜ್, ಮುದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಮಂಗಳಾ, ಚಿಕ್ಕಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಹಾಂತಮ್ಮ, ಸಿಡಿಪಿಓ ಸುಧಾ, ವೈದ್ಯಾಧಿಕಾರಿ ಸುಶ್ಮಿತಾ ಉಪಸ್ಥಿತರಿದ್ದರು. ಕೂನಬೇವು ಪಿಡಿಓ ಧನಂಜಯ ಸ್ವಾಗತಿಸಿದರು. ತುರುವನೂರು ಪಿಡಿಓ ಖಲೀಂ ಕಾರ್ಯಕ್ರಮ ನಿರೂಪಿಸಿದರು.