ಮೊದಲ ಬಾರಿಗೆ ಕೇಂದ್ರ ಆರೋಗ್ಯ ಸಚಿವಾಲಯವು ವಾಯು, ರಸ್ತೆ, ರೈಲ್ವೆ ಹಾಗೂ ಜಲ ಮಾರ್ಗಗಳ ಮೂಲಕ ಮಾನವ ಅಂಗಾಂಗ ಸಾಗಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಅಂಗಾಂಗಗಳ ಸಾಗಣೆ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಅಮೂಲ್ಯವಾದ ಅಂಗಗಳ ಬಳಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ.
‘ಅಂಗಾಂಗ ಕಸಿಗಾಗಿ ಕಾಯುತ್ತಿರುವ ಅಸಂಖ್ಯಾತ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತಿದ್ದೇವೆ. ಈ ಮಾರ್ಗಸೂಚಿಗಳು ದೇಶಾದ್ಯಂತ ಅಂಗಾಂಗ ಮರುಪಡೆಯುವಿಕೆ ಮತ್ತು ಕಸಿ ಸಂಸ್ಥೆಗಳಿಗೆ ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಖಷಿತಪಡಿಸಿಕೊಳ್ಳಲು ಮಾರ್ಗಸೂಚಿಯಾಗಿದೆ.
ವಾಸ್ತವವಾಗಿ ಅಂಗಾಂಗ ದಾನಿ ಹಾಗೂ ಅಂಗವನ್ನು ಸ್ವೀಕರಿಸುವವರು ಇಬ್ಬರೂ ಒಂದೇ ನಗರದೊಳಗೆ ಅಥವಾ ವಿವಿಧ ನಗರಗಳಲ್ಲಿ ವಿವಿಧ ಆಸ್ಪತ್ರೆಗಳಲ್ಲಿದ್ದಾಗ , ಆಸ್ಪತ್ರೆಗಳ ನಡುವೆ ಜೀವಂತ ಅಂಗವನ್ನು ಸಾಗಿಸಬೇಕಾಗುತ್ತದೆ. ಆದ್ದರಿಂದ ಕೆಲವು ನಿಯಮಗಳ ಅಗತ್ಯವಿರುತ್ತದೆ.
ವಿಮಾನದಲ್ಲಿ ಅಂಗಾಂಗಗಳನ್ನು ಸಾಗಿಸುವುದಾದರೆ ಕ್ಯಾಪ್ಟರ್ ವಿಮಾನ ಹಾರಾಟದ ಸಮಯದಲ್ಲಿ ಈ ವಿಚಾರವನ್ನು ಎಲ್ಲರಿಗೆ ತಿಳಿಯುವಂತೆ ಘೋಷಿಸುವುದು. ಅಂಗಾಂಗವಿರುವ ಬಾಕ್ಸ್ಗಳನ್ನು ಆಂಬ್ಯುಲೆನ್ಸ್ಗೆ ಕೊಂಡೊಯ್ಯಲು ಏರ್ಪೋರ್ಟ್ ಮತ್ತು ಏರ್ಲೈನ್ಸ್ ಸಿಬ್ಬಂದಿ ಟ್ರಾಲಿಗಳ ವ್ಯವಸ್ಥೆ ಮಾಡುತ್ತಾರೆ. ಯಾವುದೇ ತೊಂದರೆಯಿಲ್ಲದೆ ಹೊರಗೆ ತರಲು ಸಹಾಯವಾಗುತ್ತದೆ.
ಗ್ರೀನ್ ಕಾರಿಡಾರ್ ವ್ಯವಸ್ಥೆ
ಎಸ್ಒಪಿ ಪ್ರಕಾರ, ಆಂಬ್ಯುಲೆನ್ಸ್ ಮತ್ತು ಇತರೆ ವಾಹನಗಳ ಮೂಲಕ ಅಂಗಾಂಗಗಳನ್ನು ಸಾಗಿಸಲು ಅನುಕೂಲವಾಗುವಂತೆ ನಿರ್ದಿಷ್ಟ ಅಧಿಕಾರಿಗಳು ಅಥವಾ ಏಜೆನ್ಸಿಗಳ ಮನವಿ ಮೇರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ನೋಡಲ್ ಅಧಿಕಾರಿಯನ್ನೂ ನೇಮಿಸಲಾಗುವುದು.
ಅಂಗಾಂಗ ವರ್ಗಾವಣೆಗೆ ಸಂಬಂಧಿಸಿದಂತೆ ಮೆಟ್ರೋ ಭದ್ರತಾ ಸಿಬ್ಬಂದಿ ಮೆಟ್ರೋ ನಿಲ್ದಾಣಕ್ಕೆ ಬರುವವರೆಗೆ ಅಂಗಾಂಗ ಪೆಟ್ಟಿಗೆಯನ್ನು ಹೊತ್ತೊಯ್ಯುವ ಕ್ಲಿನಿಕಲ್ ತಂಡದೊಂದಿಗೆ ಇರಬೇಕು. ಭದ್ರತಾ ತಪಾಸಣೆಯಲ್ಲಿ ವಿಳಂಬವನ್ನು ತಪ್ಪಿಸಲು ಅಧಿಕಾರಿಗಳು ವ್ಯವಸ್ಥೆ ಮಾಡುತ್ತಾರೆ.