Friday, April 4, 2025
Google search engine

Homeರಾಜ್ಯಪೇಯಿಂಗ್ ಗೆಸ್ಟ್‌ಗಳಿಗೆ ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟ

ಪೇಯಿಂಗ್ ಗೆಸ್ಟ್‌ಗಳಿಗೆ ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-೨೦೨೦ರ ಸೆಕ್ಷನ್ ೩೦೫ರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಪೇಯಿಂಗ್ ಗೆಸ್ಟ್ ಗಳಿಗೆ ಉದ್ದಿಮೆ ಪರವಾನಗಿಯನ್ನು ನೀಡುವಾಗ ಮಾರ್ಗಸೂಚಿ ಪಾಲನೆಯ ಆದೇಶ ಜಾರಿ ಮಾಡಲಾಗಿದೆ. ಕಡ್ಡಾಯವಾಗಿ ಪಿಜಿ ಮಾಲೀಕರು ನಿಯಮಗಳನ್ನು ಪಾಲಿಸುವಂತೆ ಖಡಕ್ ಸೂಚನೆಯನ್ನು ನೀಡಲಾಗಿದೆ.

ಈ ಕುರಿತಂತೆ ಬಿಬಿಎಂಪಿಯ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-೨೦೨೦ರ ಕಾಯ್ದೆಯಡಿ, ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಪೇಯಿಂಗ್ ಗೆಸ್ಟ್‌ಗಳಿಗೆ ಪರವಾನಿಗೆ ಮಂಜೂರಾತಿ ನವೀಕರಣ ಹಾಗೂ ಈಗಾಗಲೇ ಪರವಾನಿಗೆ ಪಡೆದು ಅಸ್ತಿತ್ವದಲ್ಲಿರುವ ಪೇಯಿಂಗ್ ಗೆಸ್ಟ್‌ಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಅಂತ ತಿಳಿಸಿದ್ದಾರೆ.

೧. ಪೇಯಿಂಗ್ ಗೆಸ್ಟ್‌ಗಳಲ್ಲಿನ ಎಲ್ಲಾ ಪ್ರವೇಶ/ನಿರ್ಗಮನ ದ್ವಾರ, ಮತ್ತು ಆವರಣದ ಸುತ್ತಮುತ್ತಲಿನ ಘಟನಾವಳಿಗಳನ್ನು ಚಿತ್ರೀಕರಿಸಲು ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿರತಕ್ಕದ್ದು. ಪ್ರತಿಯೊಂದು ಸಿ.ಸಿ ಟಿ.ವಿ. ಕ್ಯಾಮರಾದ ವೀಡಿಯೋ ಮತ್ತು ಫೋಟೇಜ್‌ಗಳನ್ನು ೯೦ ದಿನಗಳವರೆಗೆ ಹಾರ್ಡ್ ವೇರ್ & ಸಾಫ್ಟ್‌ವೇರ್ ಬ್ಯಾಕಪ್ ಸ್ಟೋರೆಜ್‌ನ್ನು ಸಂರಕ್ಷಿಸತಕ್ಕದ್ದು.

೨. ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ, ಪೇಯಿಂಗ್ ಗೆಸ್ಟ್ಗಳಲ್ಲಿ ಪ್ರತಿಯೊಬ್ಬ ನಿವಾಸಿಗೆ ವಾಸಕ್ಕೆ ತಲಾ ೭೦ ಚದರ ಅಡಿಗಳ ಕನಿಷ್ಠ ಜಾಗವಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಟ್ಟಡದಲ್ಲಿ ಒದಗಿಸಲಾದ/ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ಧಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಗಿಯನ್ನು ನೀಡತಕ್ಕದ್ದು.

೩. ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯಗಳ ಸೇವೆಯನ್ನು ಒದಗಿಸಿರತಕ್ಕದ್ದು.

೪. ಪೇಯಿಂಗ್ ಗೆಸ್ಟ್‌ಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿರತಕ್ಕದ್ದು. ಪ್ರತಿಯೊಬ್ಬ ವಾಸಿಗೆ ೧೩೫ LPCD ನೀರಿನ ಲಭ್ಯತೆ ಇರುವುದನ್ನು ಮಾಲೀಕರು/ಉದ್ದಿಮೆದಾರರು ಖಚಿತಪಡಿಸಿಕೊಳ್ಳತಕ್ಕದ್ದು.

೫. ಪೇಯಿಂಗ್ ಗೆಸ್ಟ್ ಗಳಲ್ಲಿ ಉದ್ದಿಮೆದಾರರು ತಮ್ಮದೇ ಆದ ಅಡುಗೆಮನೆ ಹೊಂದಿದ್ದಲ್ಲಿ, ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ ೦೩ ತಿಂಗಳ ಅವಧಿಯೊಳಗೆ ಕಡ್ಡಾಯವಾಗಿ FSSAI ಇಲಾಖೆಯಿಂದ ಲೈಸನ್ಸ್‌ನ್ನು ಪಡೆದುಕೊಳ್ಳತಕ್ಕದ್ದು.

೬. ಉದ್ದಿಮೆದಾರರು/ಮಾಲೀಕರು ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳ ಸುರಕ್ಷತಾ ದೃಷ್ಟಿಯಿಂದ ಕನಿಷ್ಟ ಪಕ್ಷ ೦೧ ಸಿಬ್ಬಂದಿಯನ್ನಾದರೂ ಕಡ್ಡಾಯವಾಗಿ ೨೪x೭ ಸೇವೆಯಡಿಯಲ್ಲಿ ನಿಯೋಜಿಸಿರತಕ್ಕದ್ದು.

೭. ಪೇಯಿಂಗ್ ಗೆಸ್ಟ್ ಉದ್ದಿಮೆಗಳಿಗೆ ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಪತ್ರ ವಿತರಿಸುವ ಮುನ್ನ ಉದ್ದೇಶಿತ ಕಟ್ಟಡದಲ್ಲಿ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಆಳವಡಿಸಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

೮. ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ, ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯವಾಣಿ ಸಂಖ್ಯೆ-೧೫೩೩ ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ:೧೦೧ ಅನ್ನು ಪ್ರದರ್ಶಿಸುವ ಫಲಕವನ್ನು ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಟ್ಟಿದ್ದು.

೯. ಪೇಯಿಂಗ್ ಗೆಸ್ಟ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಆಳವಡಿಸಿರತಕ್ಕದ್ದು.

೧೦. ಪೇಯಿಂಗ್ ಗೆಸ್ಟ್‌ನ ಮಾಲೀಕರು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿಗೊಳಸಲು ಕ್ರಮವಹಿಸತಕ್ಕದ್ದು.

ಬಿಬಿಎಂಪಿಯ ಎಲ್ಲ ವಲಯ ಆರೊಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ತಮ್ಮ-ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಮೇಲ್ಕಂಡ ಮಾರ್ಗಸೂಚಿಗಳ ಪಾಲನೆಯಾಗುತ್ತಿರುವ ಕುರಿತು ಪ್ರತೀ 6 ತಿಂಗಳಿಗೊಮ್ಮೆ ಪೇಯಿಂಗ್‌ ಗೆಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಎಲ್ಲ ವಲಯ ಆಯುಕ್ತರುಗಳು ಮೇಲ್ಕಂಡ ಮಾರ್ಗಸೂಚಿಗಳ ಪಾಲನೆಯಾಗುತ್ತಿರುವುದರ ಕುರಿತು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಮಾರ್ಗಸೂಚಿಗಳ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ಉದ್ದಿಮೆದಾರರ ವಿರುದ್ಧ ಬಿಬಿಎಂಪಿ-2020ರ ಕಾಯ್ದೆ ಸೆಕ್ಷನ್ 307 & 308ರಂತೆ ಅಗತ್ಯ ಕ್ರಮ ಜರುಗಿಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.

RELATED ARTICLES
- Advertisment -
Google search engine

Most Popular