ಅಹಮದಾಬಾದ್: ಗುಜರಾತ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್‌ಗೆ ಕಾರು ಡಿಕ್ಕಿಯಾಗಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್‌ನ ಸಬರಕಾಂತ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಕಾರು ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಸೆಪ್ಟೆಂಬರ್ 25 ರ ಬುಧವಾರ ಬೆಳಗ್ಗೆ 6 ಗಂಟೆಗೆ ಅಪಘಾತ ಸಂಭವಿಸಿದೆ.
ಕಾರಿನಲ್ಲಿ ಎಂಟು ಜನರು ಕುಳಿತಿದ್ದರು, ಅವರೆಲ್ಲರೂ ಅರಾವಳಿ ಜಿಲ್ಲೆಯಲ್ಲಿರುವ ಶಾಮಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಅಹಮದಾಬಾದ್‌ಗೆ ಹಿಂತಿರುಗುತ್ತಿದ್ದರು. ಕಾರು ಹಿಮ್ಮತ್‌ನಗರ ಪ್ರದೇಶದ ಸಹಕಾರಿ ಗಿರಣಿ ಬಳಿ ಬಂದ ತಕ್ಷಣ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅಗ್ನಿಶಾಮಕ ದಳದವರು ಕಾರಿನಿಂದ ಶವಗಳನ್ನು ತೆಗೆಯಲು ಕಟ್ಟರ್ ಬಳಸಬೇಕಾಯಿತು.ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರೆಲ್ಲರೂ ಅಹಮದಾಬಾದ್ ನಿವಾಸಿಗಳು. ಪೊಲೀಸರು ಮೃತದೇಹಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಕಾರು ಅತಿವೇಗ ಮತ್ತು ಚಾಲಕ ನಿದ್ದೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಹಠಾತ್ ನಿದ್ದೆ ಜಾಸ್ತಿಯಾದ ಕಾರಣ ಮುಂದೆ ಹೋಗುತ್ತಿದ್ದ ಟ್ರಕ್ ಕಾಣಿಸದೇ ಕಾರು ನೇರವಾಗಿ ಡಿಕ್ಕಿ ಹೊಡೆದಿದೆ. ಹಿಂದಿನಿಂದ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಕಾರು ಮುಂಭಾಗದಿಂದ ತೀವ್ರವಾಗಿ ನಜ್ಜುಗುಜ್ಜಾಗಿದೆ ಎಂದು ಹೇಳಿದ್ದಾರೆ.