Saturday, April 19, 2025
Google search engine

Homeರಾಜ್ಯಸುದ್ದಿಜಾಲಗುಂಬಳ್ಳಿ: ಗ್ರಾವೆಲ್ ಟಿಪ್ಪರ್ ತಡೆದು ಸಾರ್ವಜನಿಕರ ಪ್ರತಿಭಟನೆ

ಗುಂಬಳ್ಳಿ: ಗ್ರಾವೆಲ್ ಟಿಪ್ಪರ್ ತಡೆದು ಸಾರ್ವಜನಿಕರ ಪ್ರತಿಭಟನೆ

ಯಳಂದೂರು: ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ೯೪೮ ರ ಕಾಮಗಾರಿಗೆ ನಿರಂತರವಾಗಿ ಟಿಪ್ಪರ್‌ಗಳಲ್ಲಿ ಗ್ರಾವೆಲ್ ಸಾಗಿಸುತ್ತಿದ್ದು ಇಲ್ಲಿನ ಸರ್ಕಲ್‌ನಲ್ಲಿ ರಸ್ತೆ ಹಾಳಾಗಿದ್ದು ಮಳೆ ನೀರು ತುಂಬಿದ್ದು ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಬುಧವಾರ ಸಂಜೆ ದಿಢೀರ್‌ಆಗಿ ಟಿಪ್ಪರ್‌ಗಳನ್ನು ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು.

ಕಳೆದ ಮೂರು ತಿಂಗಳಿಂದಲೂ ಇಲ್ಲಿನ ಕರಿಕಲ್ಲಿನ ಕ್ವಾರಿಯ ಬಳಿಯಿಂದ ನಿರಂತರವಾಗಿ ಸಂಜೆಯಿಂದ ಮದ್ಯರಾತ್ರಿವರೆಗೆ ಟಿಪ್ಪರ್‌ಗಳಲ್ಲಿ ನೂರಾರು ಲೋಡ್ ಗ್ರಾವೆಲ್ ಮಣ್ಣನ್ನು ರಾಷ್ಟ್ರೀಯ ಹೆದ್ದಾರಿ ೯೪೮ ರ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಪ್ಲೈಓವರ್ ಬ್ರಿಡ್ಜ್‌ನ ಕಾಮಗಾರಿ ನಡೆಯುತ್ತಿದೆ ಇದಕ್ಕಾಗಿ ಇಲ್ಲಿಂದ ಸಾವಿರಾರು ಟಿಪ್ಪರ್ ಮಣ್ಣನ್ನು ಇದಕ್ಕೆ ಸಾಗಿಸಲಾಗುತ್ತಿದೆ. ಹಾಗಾಗಿ ಯಳಂದೂರಿನಿಂದ ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಗುಂಬಳ್ಳಿ ಗ್ರಾಮದಲ್ಲಿ ಸಂಪೂರ್ಣವಾಗಿ ಹದಗೆಟ್ಟಿದೆ. ಗುಂಬಳ್ಳಿ ಸರ್ಕಲ್‌ನಲ್ಲಿ ಮಂಡಿಯುದ್ದದ ಹಳ್ಳ ಬಿದ್ದಿದೆ. ಇಲ್ಲಿಗೆ ಮಣ್ಣು ಸಾಗಿಸುವ ಟಿಪ್ಪರ್‌ಗಳ ಮಾಲೀಕರಿಗೆ ಈ ಹಳ್ಳಕ್ಕೆ ತಪ್ಪದೆ ಟಿಪ್ಪರ್‌ನ ಮಣ್ಣು ಹಾಕಿ ಎಂದು ಹೇಳಿದರೂ ಈ ಬಗ್ಗೆ ಇವರು ನಿರ್ಲಕ್ಷ್ಯ ವಹಿಸಿದ್ದಾರೆ. ರಾತ್ರಿ ವೇಳೆಯಲ್ಲೇ ತಮ್ಮ ಕಾರ್ಯಾಚರಣೆಯನ್ನು ಇವರು ಆರಂಭಿಸುತ್ತಾರೆ.

ಇದರೊಂದಿಗೆ ಇಲ್ಲಿ ಪ್ರಭಾವಿ ವ್ಯಕ್ತಿಗಳ ಕರಿಕಲ್ಲಿನ ಕ್ವಾರಿಗಳು ನಡೆಯುತ್ತಿದ್ದು ಇಲ್ಲಿಂದ ಅತಿ ಭಾರ ಹೊತ್ತ ಹತ್ತಾರು ಲಾರಿಗಳು ದಿನನಿತ್ಯ ಸಂಚರಿಸುತ್ತದೆ. ಇದರಿಂದಲೂ ರಸ್ತೆ ಹಾಳಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಕ್ರಮ ವಹಿಸುತ್ತಿಲ್ಲ. ಈ ರಸ್ತೆಯನ್ನು ದುರಸ್ತಿಪಡಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ. ರಸ್ತೆಗೆ ಹಣ ಮಂಜೂರಾಗಿದೆ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಸಬೂಬು ನೀಡಿ ನುಣುಚಿಕೊಳ್ಳುತ್ತಾರೆ.

ಈಗ ಮಳೆಗಾಲವಾಗಿದೆ. ರಸ್ತೆಯ ಹಳ್ಳದಲ್ಲಿ ನೀರು ನಿಲ್ಲುತ್ತದೆ. ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತದೆ. ಪಕ್ಕದಲ್ಲೇ ಶಾಲೆ ಇದ್ದು ವಿದ್ಯಾರ್ಥಿಗಳು ಮನೆಗಳಿಗೆ ತೆರಳಲು ತೊಂದರೆಯಾಗುತ್ತದೆ. ಕಾಮಗಾರಿ ಆರಂಭಗೊಳ್ಳುವವರೆಗೆ ಇದಕ್ಕೆ ತಾತ್ಕಾಲಿಕವಾಗಿ ಮಣ್ಣು ಸುರಿದು ಇದನ್ನು ದುರಸ್ತಿಗೊಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮದ ಮಾಧು, ನಿಂಗರಾಜು ಹರೀಶ, ಮಲ್ಲಿಕಾರ್ಜುನ, ರಂಗಯ್ಯ, ರಂಗಸ್ವಾಮಿ ಸೇರಿದಂತೆ ಹಲವರು ಎಚ್ಚರಿಕೆ ನೀಡಿದರು.


RELATED ARTICLES
- Advertisment -
Google search engine

Most Popular