ಗುಂಡ್ಲುಪೇಟೆ: ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಮೂರು ವಿಭಾಗದ ಕೋರ್ಟ್ ನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 550 ಪ್ರಕರಣಗಳ ಪೈಕಿ ಒಟ್ಟು 256 ವ್ಯಾಜ್ಯ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿವೆ.
ಹಿರಿಯ ಶ್ರೇಣಿ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಬಸವರಾಜ ತಳವಾರ ಸಮ್ಮುಖದಲ್ಲಿ 243 ವ್ಯಾಜ್ಯ ಪ್ರಕರಣಗಳು ವಿಚಾರಣೆಗೆ ಬಂದವು. ಇವುಗಳಲ್ಲಿ 146 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾದವು. ಪ್ರಧಾನ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಜಿ.ಜೆ.ಶಿವಕುಮಾರ್ ಸಮ್ಮುಖದಲ್ಲಿ 174 ವ್ಯಾಜ್ಯ ಪ್ರಕರಣಗಳು ವಿಚಾರಣೆಗೆ ಬಂದವು. ಇವುಗಳಲ್ಲಿ 58 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾದವು. ಅಪರ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಎ.ಕಾಂತಮ್ಮ ಇವರ ಸಮ್ಮುಖದಲ್ಲಿ 133 ವ್ಯಾಜ್ಯ ಪ್ರಕರಣಗಳು ವಿಚಾರಣೆಗೆ ಬಂದವು. ಇವುಗಳಲ್ಲಿ 52 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾದವು.
ಒಟ್ಟು 256 ವ್ಯಾಜ್ಯ ಪ್ರಕರಣಗಳಿಂದ 2,14,95,829 ರೂ ಹಣವನ್ನು ಗ್ರಾಹಕರು ಸಾಲ ಪಡೆದಿದ್ದ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳಿಗೆ ನ್ಯಾಯಾಧೀಶರುಗಳ ಮುಖಾಂತರ ಪಾವತಿ ಮಾಡಿದರು.
ಚೆಕ್ಕು ಅಮಾನ್ಯ ಪ್ರಕರಣ, ಬ್ಯಾಂಕ್ ವಸೂಲಾತಿ ಪ್ರಕರಣ, ಉದ್ಯೋಗ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕಾರ್ಮಿಕರ ವೇತನ ಸಂಬಂಧಿತ ಕ್ಲೇಮುಗಳು, ವಿದ್ಯುತ್ ಹಾಗು ನೀರಿನ ಶುಲ್ಕಗಳು, ಕೌಟುಂಬಿಕ ಮತ್ತು ಸಿವಿಲ್ ಪ್ರಕರಣಗಳು ನ್ಯಾಯಾಧೀಶರು ಹಾಗೂ ಸಂಧಾನಕಾರರ ಮಧ್ಯಸ್ಥಿಕೆಯಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿವೆ.