ಗುಂಡ್ಲುಪೇಟೆ: ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ-ಲಿಂಗಾಯಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬಸವೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಬಸವೇಶ್ವರ ಪ್ರತಿಮೆಯನ್ನು ಮೂರ್ತಿಯನ್ನು ಅಲಂಕೃತ ವಾಹನದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಿದ್ದಮಲ್ಲ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಷಡಕ್ಷರಿ ಸ್ವಾಮೀಜಿ, ಶಾಸಕ ಎಚ್.ಎಂ.ಗಣೇಶಪ್ರಸಾದ್ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಚಾಲನೆ ನೀಡಿದರು.
ಬಸವ ಜಯಂತಿ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಳಿರು ತೋರಣ ಮತ್ತು ಬಸವೇಶ್ವರ ಭಾವಚಿತ್ರ ಇರುವ ಬಂಟಿಂಗ್ಸ್‍ಗಳನ್ನು ಕಟ್ಟಲಾಗಿತ್ತು. ವಿಶ್ವಗುರು ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಬೃಹತ್ ಗಾತ್ರದ ಕಟೌಟ್ ಹಾಕಿ ದೀಪಾಲಂಕಾರ ಮಾಡಲಾಗಿತ್ತು. ಜಯಂತಿ ಹಿನ್ನೆಲೆಯಲ್ಲಿ ಜೆಎಸ್‍ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಬಳಿ ಸೋಮವಾರ ಬೆಳಗ್ಗೆ ವೀರಶೈವ-ಲಿಂಗಾಯಿತ ಸಮುದಾಯದ ಮಂದಿ ಸಾವಿರ ಸಂಖ್ಯೆಯಲ್ಲಿ ಸೇರಿದ್ದರು.
ವಿಜೃಂಭಣೆಯ ಮೆರವಣಿಗೆ: ಪಟ್ಟಣ ಜೆಎಸ್‍ಎಸ್ ಕಾಲೇಜು ಬಳಿಯಿಂದ ಆರಂಭವಾದ ಬಸವೇಶ್ವರರ ಪ್ರತಿಮೆ ಮೆರವಣಿಗೆ ಹೆದ್ದಾರಿ ರಸ್ತೆಯ ಮೂಲಕ ಸಾಗಿ, ಕಿತ್ತೂರು ರಣಿ ಚನ್ನಮ್ಮ ರಸ್ತೆಯಲ್ಲಿ ಸಂಚರಿಸಿತು. ನಂದಿಧ್ವಜ, ವೀರಭದ್ರ ಕುಣಿತ, ಗೊರವರ ಕುಣಿತ, ಡೊಳ್ಳುಕುಣಿತ, ಕೇರಳದ ಚೆಂಡೆ ವಾದ್ಯ, ಬ್ಯಾಂಡ್ ಸೆಟ್, ಮಂಗಳವಾದ್ಯ, ನಗಾರಿ ಸೇರಿದಂತೆ ಹಲವು ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ನಂತರ ಮೂಲಸ್ಥಾನದಲ್ಲಿ ಕೊನೆಗೊಂಡಿತು. ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯದ ಮುಖಂಡರು ಕುಡಿಯುವ ನೀರು ವಿತರಣೆ ಮಾಡಿ ಭಾವೈಕ್ಯತೆ ಮೆರೆದರು.
ನೃತ್ಯ ಮಾಡಿ ಸಂಭ್ರಮ: ಬಸವ ಜಯಂತಿ ಹಿನ್ನೆಲೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ಪಟ್ಟಣಕ್ಕೆ ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕಲಾತಂಡಗಳ ತಾಳಕ್ಕೆ ಯುವಕರು, ವಯಸ್ಕರು ನೃತ್ಯ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಪಟ್ಟಣದ ಸೋಮೇಶ್ವರ ವಿದ್ಯಾರ್ಥಿ ನಿಲಯದಲ್ಲಿ ಜಯಂತಿಯಲ್ಲಿ ಪಾಲ್ಗೊಂಡಿದ್ದವರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಎಚ್.ಎಂ.ಗಣೇಶಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಎಂ.ಪಿಸುನೀಲ್, ಹಂಗಳ ನಟೇಶ್, ಚನ್ನಮಲ್ಲಿಪುರ ಬಸವಣ್ಣ, ಪ್ರಣಯ್, ಶಿಂಡನಪುರ ಮಂಜು, ಶಿವಪುರ ಮಂಜಪ್ಪ, ನಮೋ ಮಂಜು, ಚಂದ್ರಶೇಖರ್, ಅಭಿಷೇಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.
