ಚಾಮರಾಜನಗರ: ಲೋಕಸಭಾ ಚುನಾವಣೆ-೨೦೨೪ರ ಸಂಬಂಧ ಚುನಾವಣೆಯು ಇದೇ ತಿಂಗಳ ಏಪ್ರಿಲ್ ೨೬ ರಂದು ಮೊದಲ ಹಂತದ ಮತದಾನ ನಡೆಯಲಿರುವುದರಿಂದ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸಲು ಗುಂಡ್ಲುಪೇಟೆ ಪಟ್ಟಣದಿಂದ ಮಂಗಲ ಗ್ರಾಮ ಪಂಚಾಯತಿಯವರೆಗೆ ಬೈಕ್ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಆಡಳಿತ, ಪುರಸಭೆ, ತಾಲ್ಲೂಕು ಪಂಚಾಯಿತಿ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಗುಂಡ್ಲುಪೇಟೆ ಪಟ್ಟಣದಲ್ಲಿಂದು ಆಯೋಜಿಸಲಾಗಿದ್ದ ಮತದಾನದ ಜಾಗೃತಿ ಬೈಕ್ ಜಾಥಾಗೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಅವರು ಚಾಲನೆ ನೀಡಿದರು.
ಇದೇ ವೇಳೆ ಬೈಕ್ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಅವರು ನಾಗರಿಕರು ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತಚಲಾಯಿಸಬೇಕು. ಒಂದು ಮತವು ಸಹ ಬಹಳ ಅಮೂಲ್ಯವಾದದ್ದು, ಹಣದ ಆಸೆಗೆ ಮತವನ್ನು ಮಾರಿಕೊಳ್ಳಬೇಡಿ. ಮತವನ್ನು ಮಾರಿಕೊಂಡರೆ ತಮ್ಮ ಮಕ್ಕಳನ್ನು ಮಾರಿಕೊಂಡಂತೆ ಎಂದರು. ಬೈಕ್ ಜಾಥವು ಗುಂಡ್ಲುಪೇಟೆ ನಗರದ ಮುಖ್ಯ ರಸ್ತೆಯಿಂದ ಪ್ರಾರಂಭವಾಗಿ ಹಂಗಳ, ಮೇಲುಕಾಮನಹಳ್ಳಿ ಕಾಲೋನಿ, ಕಾರೆಮಾಳ, ಆಡಿನಕಣಿವೆ ಮತ್ತು ಕಣಿಯನಪುರ ಕಾಲೋನಿಯವರೆಗೆ ನಡೆಯಿತು. ಈ ವೇಳೆ ಜಿಂಗಲ್ಸ್ ಗಳು ಹಾಗೂ ಮಾನವ ಸರಪಳಿ ನಿರ್ಮಿಸಿ ನಮ್ಮ ಮತ ನಮ್ಮ ಹಕ್ಕು, ಚುನಾವಣಾ ಪರ್ವ – ದೇಶದ ಗರ್ವ ಮತ್ತು ಮತದಾನ ಒಂದು ವರದಾನ, ಕಡ್ಡಾಯವಾಗಿ ಮತ ಹಾಕಿ ಎಂಬ ಘೋಷವಾಕ್ಯದ ಮೂಲಕ ಸಾರ್ವಜನಿಕರಲ್ಲಿ ಮತ ಚಲಾವಣೆಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಅಲ್ಲದೇ ಗ್ರಾಮಸ್ಥರಿಗೆ ಮತದಾನದ ಮಮತೆಯ ಕರೆಯೋಲೆ ಆಮಂತ್ರಣ ಪತ್ರವನ್ನು ನೀಡಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ತಿಳಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತರಾಜು ರವರು ಅಲ್ಲಿ ನೆರೆದಿದ್ದ ಗ್ರಾಮಸ್ಥರಿಗೆ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಭೋದಿಸಿದರು. ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮೋಹನ್ ಕುಮಾರ್, ಗುಂಡ್ಲುಪೇಟೆ ತಾಲ್ಲೂಕು ವ್ಯಾಪ್ತಿಯ ಎಲ್ಲಾ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್.ಡಿ.ಎ.ಎ, ಬಿಲ್ ಕಲೆಕ್ಟರ್, ಡಿ.ಇ.ಒ ಮತ್ತು ವಾಟರ್‍ಮ್ಯಾನ್‌ಗಳು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಇದ್ದರು.