ಗುಂಡ್ಲುಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಬುಧವಾರ ದೂರು ಸ್ವೀಕರಿಸಿದರು.
ಪ್ರವಾಸಿ ಮಂದಿರದಲ್ಲಿ ಚಾಮರಾಜನಗರ ಕರ್ನಾಟಕ ಲೋಕಾಯುಕ್ತ ವಿಭಾಗ ಉಪಾಧೀಕ್ಷಕ ಕೆ.ಟಿ.ಮ್ಯಾಥ್ಯೂಸ್ ಥಾಮಸ್ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಹಲವು ದೂರುಗಳನ್ನು ನೀಡಿದರು.
ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಿರುವ ಅರ್ಜಿಗೆ ಗ್ರಾಮ ಪಂಚಾಯಿತಿಯಿಂದ ಅಸಮರ್ಪಕ ಮಾಹಿತಿ ನೀಡಿದ ಬಗ್ಗೆ ನಿವೃತ್ತ ಯೋಧರೊಬ್ಬರು ದೂರು ಸಲ್ಲಿಸಿದರು. ಸಮರ್ಪಕ ಮಾಹಿತಿ ನೀಡುವಂತೆ ನಾವು ಸೂಚನೆ ನೀಡಲು ಬರಲ್ಲ. ಮೇಲ್ಮನವಿ ಪ್ರಾಧಿಕಾರಕ್ಕೆ ಹೋಗುವಂತೆ ತಿಳಿಸಲಾಯಿತು.
ತಮ್ಮ ಪತ್ನಿಯವರ ನಿವೃತ್ತಿ ಬಾಬ್ತು ಹಣವನ್ನು ಬ್ಯಾಂಕ್ ಖಾತೆಗೆ ಜಮೆಯಾಗಲು ಉಪಖಜಾನೆಯಿಂದ ಧೃಡೀಕರಣ ಕಳುಹಿಸಿಕೊಡುವುದು ವಿಳಂಬವಾಗಿರುವ ಬಗ್ಗೆ ಪಟ್ಟಣದ ಪುರಸಭೆ ಮಾಜಿ ಸದಸ್ಯ ಎನ್.ಶಿವಣ್ಣ ದೂರಿದರು. ಈ ಸಂದರ್ಭದಲ್ಲಿ ಉಪಖಜಾನಾಧಿಕಾರಿ ನಾಗರತ್ನ ವಿವರಣೆ ನೀಡಿದರು. ಅರ್ಜಿದಾರರು ಮತ್ತು ಅಧಿಕಾರಿ ನಡುವೆ ವಾಗ್ವಾದ ನಡೆಯಿತು. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಬ್ಯಾಂಕ್ ಗೆ ತೆರಳಿ ತಾಂತ್ರಿಕ ಸಮಸ್ಯೆ ಸರಿಪಡಿಸುವಂತೆ ಉಪಖಜಾನೆ ನೌಕರರೊಬ್ಬರಿಗೆ ಲೋಕಾಯುಕ್ತ ಅಧಿಕಾರಿಗಳು ಸೂಚನೆ ನೀಡಿದರು.
ಕಂದಾಯ ದಾಖಲೆಗಳ ಅಲಭ್ಯತೆ ಬಗ್ಗೆ ಪಟ್ಟಣದ ಅಶೋಕ್‌ಕುಮಾರ್ ದೂರು ಸಲ್ಲಿಸಿದರು. ಅತಿ ಗಣ್ಯ ವಸತಿ ಗೃಹದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ತಮಗೆ ಸಮರ್ಪಕ ಸಂಬಳ ಬಂದಿಲ್ಲ ಎಂದು ನೌಕರರು ದೂರಿದರು.
ಲೋಕೋಪಯೋಗಿ ಇಲಾಖೆ ಇಇ ರಿಗೆ ಕರೆ ಮಾಡಿ ನೌಕರರಿಗೆ ಸಂಬಳ ಕೊಡಿಸುವಂತೆ ಲೋಕಾಯುಕ್ತ ಡಿಎಸ್ಪಿ ತಿಳಿಸಿದರು.
11 ಇ ಸ್ಕೆಚ್ ಕೊಡಿಸಿಕೊಡದ ಬಗ್ಗೆ ಪಿಡಿಒ ಮೇಲೆ ದೂರು ಸಲ್ಲಿಸಲಾಯಿತು. ಪಟ್ಟಣದಲ್ಲಿ ಲೇಔಟ್ ಗಳ ನಿರ್ಮಾಣದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ ಕಬಳಿಕೆ, ಖಾಸಗೀ ಶಾಲೆಯವರಿಂದ ಸಣ್ಣ ನೀರಾವರಿ ಇಲಾಖೆ ಭೂಮಿ ಒತ್ತುವರಿ. ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ವೇಗ ನಿಯಂತ್ರಣದ ಬಗ್ಗೆ ದೂರು, ಮೌಕಿಕ ಮನವಿಗಳು ಕೇಳಿಬಂದವು.
ಪಟ್ಟಣ ಮತ್ತು ತಾಲೂಕಿನ ನಾನಾ ಕಡೆಗಳಿಂದ ಆಗಮಿಸಿದ್ದ ಸಾರ್ವಜನಿಕರು ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದರು.
ಈ ವೇಳೆ ತಹಸೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ, ತಾಪಂ ಇಓ ಜಿ.ಶ್ರೀಕಂಠರಾಜೇಅರಸ್, ಲೋಕಾಯುಕ್ತ ಇನ್ಸ್ ಪೆಕ್ಟರ್ ಸಿ.ಆರ್.ಶಶಿಕುಮಾರ್, ರವಿಕುಮಾರ್, ಬಿಸಿಎಂ ಇಲಾಖೆ ಅಧಿಕಾರಿ ಲಿಂಗರಾಜು, ಆರ್‌ಎಫ್‌ಒ ಎನ್.ಪಿ.ನವೀನ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಂಜುಂಡೇಗೌಡ, ಲೋಕಾಯುಕ್ತ ಪೊಲೀಸ ಸಿಬ್ಬಂದಿ ಗುರುಪ್ರಸಾದ್, ಗೌತಮ್, ಇಸಾಕ್ ಷರೀಫ್, ಕೃಷ್ಣೇಗೌಡ ಹಾಜರಿದ್ದರು.