Friday, April 11, 2025
Google search engine

Homeರಾಜ್ಯಸುದ್ದಿಜಾಲಗುಂಡ್ಲುಪೇಟೆ: 1, 2, 3ನೇ ವಾರ್ಡ್‍ನಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಗುಂಡ್ಲುಪೇಟೆ: 1, 2, 3ನೇ ವಾರ್ಡ್‍ನಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ವಾರದಿಂದ ನೀರು ಪೂರೈಸುವಲ್ಲಿ ಅಧಿಕಾರಿಗಳು ವಿಫಲ,
ಸಂಪೂರ್ಣವಾಗಿ ಕುಸಿದ ಪುರಸಭೆ ಆಡಳಿತ

– ಬಸವರಾಜು ಎಸ್.ಹಂಗಳ
ಗುಂಡ್ಲುಪೇಟೆ: ಪಟ್ಟಣದ 1, 2, 3ನೇ ವಾರ್ಡ್‍ಗೆ ಕಳೆದ ಒಂದು ವಾರದಿಂದ ನೀರು ಪೂರೈಕೆಯಾಗದ ಕಾರಣ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಮೂಲಕ ವಾರ್ಡ್‍ಗಳಿಗೆ ನೀರು ಪೂರೈಕೆ ಮಾಡುವಲ್ಲಿ ಅಧಿಕಾರಿ ವರ್ಗದವರು ವಿಫಲರಾಗಿದ್ದು, ಪುರಸಭೆ ಆಡಳಿತ ಸಂಪೂರ್ಣ ಕುಸಿದು ಹೋಗಿದೆ.

ಪಟ್ಣದ 1ನೇ ವಾರ್ಡ್(ಎಚ್.ಎಸ್.ಮಹದೇವಪ್ರಸಾದ್ ನಗರ) ಹಾಗೂ 2ನೇ ವಾರ್ಡ್(ಜಾಕೀರ್ ಹುಸೇನ್ ನಗರ-ಬೀಡಿ ಕಾಲೋನಿ) ಎರಡು ವಾರ್ಡ್‍ಗಳಿಗೂ ಕಬಿನಿ ನೀರು ಸಮರ್ಪಕವಾಗಿ ಪೂರೈಕೆಯಾಗದ ಕಾರಣ ಹಾಗೂ ವಾಟರ್ ಮ್ಯಾನ್ ರಜೆಯಲ್ಲಿ ತೆರಳಿರುವುದರಿಂದ ಪುರಸಭೆ ಇಂಜಿನಿಯರ್ ನೀರು ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ವಾರದಿಂದ 3ನೇ ವಾರ್ಡ್(ಜಾಕೀರ್ ಹುಸೇನ್ ನಗರ)ನ ಮೋಟರ್ ಸುಟ್ಟು ಹೋಗಿ ದುರಸ್ತಿಗೆ ಪುರಸಭೆ ಮುಂದಾಗದ ಹಿನ್ನೆಲೆ ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ.

ಮನವಿಗೆ ಸ್ಪಂದಿಸದ ಪುರಸಭೆ: ವಾರ್ಡ್‍ಗಳಿಗೆ ನೀರು ಪೂರೈಕೆಯಾಗಿ ವಾರ ಕಳೆದಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿನ ರೀತಿಯಲ್ಲಿ ತಲೆದೋರಿದೆ. ಈ ಬಗ್ಗೆ ಹಲವು ಬಾರಿ ಪುರಸಭೆ ಅಧಿಕಾರಿಗಳು ಹಾಗು ಸದಸ್ಯರ ಗಮನಕ್ಕೆ ನಿವಾಸಿಗಳು ತಂದರೂ ಕೂಡ ಮುಖ್ಯಾಧಿಕಾರಿಗಳು ಹಾಗೂ ಇಂಜಿನಿಯರ್ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಇದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಹಣ ನೀಡಿ ಟ್ಯಾಂಕರ್ ಮೂಲಕ ನೀರು ಖರೀದಿ: ವಾರದಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆ ವಾರ್ಡ್ ನಿವಾಸಿಗರು ಹಣ ಕೊಟ್ಟು ಖಾಸಗಿಯಾಗಿ ಟ್ಯಾಂಕರ್ ಹಾಗೂ ಆಟೋಗಳ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಈ ನೀರು ಕೂಡ ಒಂದು ಅಥವಾ ಎರಡು ದಿನದಲ್ಲಿ ಖಾಲಿಯಾಗುತ್ತಿರುವ ಕಾರಣ ಸ್ನಾನ, ಬಟ್ಟೆ ಹೊಗೆಯುವುದಕ್ಕೆ ಸಮಸ್ಯೆಯಾಗುತ್ತಿದೆ. ಈ ಮಧ್ಯೆ ನೀರಿಗಾಗಿ ಬಡವರ ಪಾಡಂತು  ಹೇಳ ತೀರದಾಗಿದೆ.

ಮೋಟರ್ ದುರಸ್ತಿ ಯಾವಾಗ?: 3ನೇ ವಾರ್ಡ್(ಜಾಕೀರ್ ಹುಸೇನ್ ನಗರ)ನಲ್ಲಿ ಮೋಟರ್ ಸುಟ್ಟು ಹೋಗಿ ವಾರ ಕಳೆದರು ದುರಸ್ತಿಯಾಗದ ಕಾರಣ ನಿವಾಸಿಗರು ಪುರಸಭೆ ಆಡಳಿತಕ್ಕೆ ಶಾಪ ಹಾಕುತ್ತಿದ್ದು, ಯಾವಾಗ ಮೋಟರ್ ದುರಸ್ತಿ ಮಾಡಿಸಿ ನೀರು ಪೂರೈಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಕೂಡಲೇ ದುರಸ್ತಿ ಮಾಡದಿದ್ದರೆ ಪುರಸಭೆ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪುರಸಭೆ ಸದಸ್ಯರ ಮಾತಿಗೂ ಕಿಮ್ಮತ್ತಿನ ಬೆಲೆಯಿಲ್ಲ: ವಾರ್ಡ್‍ಗಳಲ್ಲಿ ನೀರಿಗೆ ಹಾಹಾಕಾರ ಎದ್ದಿರುವ ಕಾರಣ ಸಮಸ್ಯೆ ಬಗೆಹರಿಸುವಂತೆ ಪುರಸಭೆ ಮುಖ್ಯಾಧಿಕಾರಿ ಹಾಗು ಇಂಜಿನಿಯರ್ ಗಮನಕ್ಕೆ ಆಯಾಯಾ ವಾರ್ಡ್ ಸದಸ್ಯರು ತಂದರೂ ಕೂಡ ನಿಗಧಿತ ಕಾಲಾವಧಿಯೊಳಗೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಇದರಿಂದ ವಾರ್ಡ್ ಸದಸ್ಯರ ಮಾತಿಗೂ ಸಹ ಕಿಮ್ಮತ್ತಿಲ್ಲ ಎಂಬಂತಾಗಿದೆ ಎಂದು 2ನೇ ವಾರ್ಡ್ ಪುರಸಭೆ ಸದಸ್ಯ ಎಚ್.ಆರ್.ರಾಜಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕರ ಗಮನಕ್ಕಿಲ್ಲವೇ?
ಪಟ್ಟಣದ 1, 2, 3ನೇ ವಾರ್ಡ್‍ಗೆ ವಾರದಿಂದ ನೀರು ಪೂರೈಕೆಯಾಗದೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ವಿಚಾರ ಸ್ಥಳೀಯ ಶಾಸಕ ಎಚ್.ಎಂ.ಗಣೇಶಪ್ರಸಾದ್ ಗಮನಕ್ಕಿಲ್ಲವೇ ಎಂದು ನಿವಾಸಿಗರು ಪ್ರಶ್ನಿಸಿದ್ದಾರೆ.
ಈ ಹಿಂದೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಅಧಿಕಾರಿಗಳ ಸಭೆಯಲ್ಲಿ ವಾರ್ಡ್‍ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದರು. ಹೀಗಿದ್ದರೂ ಸಹ ವಾರದಿಂದ ಉತ್ಪತ್ತಿಯಾಗಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ವಹಿಸುವ ಮೂಲಕ ಶಾಸಕರ ಮಾತಿಗೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

ಕಬಿನಿ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾದ ಕಾರಣ 1, 2, 3ನೇ ವಾರ್ಡ್‍ಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕೂಡಲೇ ಸಮಸ್ಯೆ ಬಗೆಹರಿಸಿ ನೀರು ಪೂರೈಕೆ ಮಾಡಲಾಗುವುದು. ಜೊತೆಗೆ 3ನೇ ವಾರ್ಡ್‍ನಲ್ಲಿ ಕೆಟ್ಟು ನಿಂತಿರುವ ಮೋಟರ್ ಅನ್ನು ದುರಸ್ತಿ ಪಡಿಸಲಾಗುವುದು. ಇಲ್ಲದಿದ್ದರೆ ಪುರಸಭೆ ಮೂಲಕವೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ.

– ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ.




RELATED ARTICLES
- Advertisment -
Google search engine

Most Popular