ಗುಂಡ್ಲುಪೇಟೆ: ಬಡವರಾಗಿ ಇಲಾಖೆಗೆ ಸೇರುವ ನಮ್ಮ ಅಧಿಕಾರಿ ನೌಕರರು ಸುದೀರ್ಘ ಅವಧಿವರೆಗಿನ ಜನರ ಒಡನಾಟದ ಮೂಲಕ ಹೃದಯ ಶ್ರೀಮಂತರಾಗುತ್ತಾರೆ ಎಂದು ವಿಭಾಗೀಯ ಸಂಚಲನಾಧಿಕಾರಿ ದಶರತ್ ಅಭಿಪ್ರಾಯ ಪಟ್ಟರು.
ಪಟ್ಟಣದ ಸ್ಥಳೀಯ ಸಾರಿಗೆ ಸಂಸ್ಥೆ ಬಸ್ ಘಟಕದಲ್ಲಿ ನಡೆದ ಅಧಿಕಾರಿಗಳು ಮತ್ತು ನೌಕರರ ಬೀಳ್ಕೊಡುಗೆ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅವರು, ಬಿಡುವಿಲ್ಲದ ದುಡಿಮೆ ಮೂಲಕ ವರ್ಷವಿಡಿ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿಗಧಿತ ಸ್ಥಳಕ್ಕೆ ಕರೆದೋಯ್ಯುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವುದು ಹೆಮ್ಮೆಯ ವಿಷಯ ಎಂದರು.
ಕೆಎಸ್‍ಆರ್‍ಟಿಸಿ ಬಸ್ ಚಾಲಕರು ನಿತ್ಯ ನೂರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಕೆಲಸ ಮಾಡಿದರೆ. ಎಲ್ಲಾ ರೀತಿಯ ಜನರೊಂದಿಗೆ ವ್ಯವಹರಿಸುವ ಕೆಲಸ ನಿರ್ವಾಹಕರದ್ದು, ಇದಕ್ಕೆ ಪೂರಕ ವ್ಯವಸ್ಥೆ ಮಾಡಿಕೊಡುವ ಜವಬ್ದಾರಿ ಅಧಿಕಾರಿಗಳದ್ದು. ಹೀಗಾಗಿ ಹಬ್ಬ, ಹರಿದಿನಗಳಿಗೆ ಪ್ರಯಾಣಿಕರನ್ನು ಸ್ವಸ್ಥಾನಗಳಿಗೆ ಕರೆದೋಯ್ಯುವ ಕೆಲಸ ಮಾಡುವ ಕಾರಣ ನಮ್ಮ ಚಾಲಕ, ನಿರ್ವಾಹಕರು, ಅಧಿಕಾರಿಗಳು, ಮುಖ್ಯಸ್ಥರು ಹಬ್ಬ ಮಾಡಲಾಗುವುದಿಲ್ಲ. ಕುಟುಂಬದಲ್ಲಿ ನಡೆಯುವ ಸಂತಸದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶವಿಲ್ಲ. ಆದರೂ ಕುಟುಂಬ ಇವರ ಕೆಲಸಕ್ಕೆ ನೆರವಾಗುತ್ತಾರೆ ಎಂಬುದು ಹೆಮ್ಮೆಯ ವಿಷಯ ಎಂದರು.
ಶ್ರಮದ ಬೆಲೆ ಅರಿಯುವ ಕಾರಣ ಇತರೆ ಎಲ್ಲಾ ಇಲಾಖೆಗಳಿಗೆ ಹೋಲಿಕೆ ಮಾಡಿದಲ್ಲಿ ಕೆಎಸ್‍ಆರ್‍ಟಿಸಿಯವರ ಮಕ್ಕಳು ಉನ್ನತ ವ್ಯಾಸಂಗ ಮಾಡುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ ಎಂಬುದು ಖುಷಿಯ ವಿಚಾರ. ಅಲ್ಲದೇ ನಿಯತ್ತಿನ ದುಡಿಮೆಗೆ ಇಲಾಖೆಯಲ್ಲಿ ತಕ್ಕ ಪ್ರತಿಫಲ ಇರುತ್ತದೆ. ಪ್ರಸ್ತುತ ಇಲಾಖೆಯಲ್ಲಿರುವ ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡಿ. ದುಶ್ಚಟ ಮತ್ತು ಗೈರು ಹಾಜರಿ ಮೂಲಕ ದೈನಂದಿನ ನಿರ್ವಹಣೆಗೆ ತೊಂದರೆ ಉಂಟು ಮಾಡಬೇಡಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತರಾದ ಸಂಚಾರ ನಿರೀಕ್ಷಕ ಕೆ.ಬಿ.ಮಹದೇವಪ್ಪ, ಸಹಾಹಕ ಸಂಚಾರ ನಿರೀಕ್ಷಕ ಸಿದ್ದರಾಜು, ಚಾಲಕ ಮಹದೇವನಾಯಕರಿಗೆ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಘಟಕ ವ್ಯವಸ್ಥಾಪಕಿ ಪುಷ್ಪ ಮತ್ತು ಇಲಾಖೆ ಅಧಿಕಾರಿಗಳು ಮತ್ತು ಚಾಲಕ, ನಿರ್ವಾಹಕರು ಹಾಜರಿದ್ದರು.