• ಬಸವರಾಜು ಎಸ್.ಹಂಗಳ
ಗುಂಡ್ಲುಪೇಟೆ: ಆಧಾರ್ ತಿದ್ದುಪಡಿಗಾಗಿ 3-4 ದಿನ ಅಲೆದರೂ ಟೋಕನ್ ಸಿಗದ ಹಿನ್ನೆಲೆ ಆಧಾರ್ ಸೇವಾ ಕೇಂದ್ರದ ಮುಂದೆ ಬುಧವಾರ ರಾತ್ರಿ ಮಲಗಿದ ಪ್ರಸಂಗ ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಜರುಗಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಹಾಕಲು ಆಧಾರ್‍ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿರುವ ಹಿನ್ನೆಲೆ ತಾಲೂಕಿನ ಬೇರಂಬಾಡಿ ಗ್ರಾಮದ ಚೆನ್ನಾಜಮ್ಮ, ಸಿದ್ದಮ್ಮ, ನೇನೆಕಟ್ಟೆ ಗ್ರಾಮದ ಮಾಲೇಗೌಡ, ಬೆಟ್ಟಗೌಡನಹುಂಡಿ ಗ್ರಾಮದ ಬೆಳ್ಳಿಬಸವೇಗೌಡ ಎಂಬುವವರು ಆಧಾರ್ ಸೇವಾ ಕೇಂದ್ರದ ಮುಂದೆ ಬುಧವಾರ ರಾತ್ರಿ ಶಾಲು ಹೊದ್ದು ಮಲಗಿದ್ದಾರೆ. ನಂತರ ಗುರುವಾರ ಮೊದಲಿಗರಾಗಿ ಟೋಕನ್ ಪಡೆದು ಆಧಾರ್‍ಗೆ ಮೊಬೈಲ್ ನಂಬರ್ ಲಿಂಕ್ ಹಾಗೂ ತಿದ್ದುಪಡಿ ಮಾಡಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಬ್ಯಾಂಕ್ ಅಕೌಂಟ್ ಗೆ ಆಧಾರ್ ಹಾಗು ಮೊಬೈಲ್ ನಂಬರ್ ಜೋಡಣೆ ಕಡ್ಡಾಯವಾಗಿದೆ. ಈ ಕಾರಣದಿಂದ ಆಧಾರ್ ಸೇವಾ ಕೇಂದ್ರದ ಮುಂದೆ ಪ್ರತಿನಿತ್ಯ ನೂರಾರು ಮಂದಿ ಮಹಿಳೆಯರು ಜಮಾಯಿಸುತ್ತಿದ್ದಾರೆ. ಇದರಿಂದ ತಾಲೂಕು ಕಚೇರಿಯಲ್ಲಿ ಜನಜಂಗುಳಿ ಹೆಚ್ಚಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಜನರು ಸರತಿ ಸಾಲಿನಲ್ಲಿ ನಿಂತು ಹೈರಾಣಾಗುತ್ತಿದ್ದಾರೆ. ಈ ಮಧ್ಯೆ ಸರ್ವರ್ ಸಮಸ್ಯೆ ಜನರಿಗೆ ಮನತ್ತಷ್ಟು ತಲೆನೋವು ತಂದೊಡ್ಡಿದೆ.
ಆಹಾರ ಇಲಾಖೆ ಕಚೇರಿಯಲ್ಲಿಯೂ ಜನವೋ ಜನ: ಗೃಹ ಲಕ್ಷ್ಮಿ ಫಲಾನುಭವಿಗಳಾಗಲು ಪಡಿತರ ಕಾರ್ಡ್‍ಗಳಲ್ಲಿ ಯಜಮಾನಿ ಹೆಸರು ಮೊದಲಿಗೆ ಇರಬೇಕು ಎಂಬ ನಿಯಮವಿದೆ. ಈ ಕಾರಣ ತಾಲೂಕು ಕಚೇರಿಯಲ್ಲಿರುವ ಆಹಾರ ಇಲಾಖೆ ಕಚೇರಿ ಬಳಿ ನೂರಾರು ಮಂದಿ ಮಹಿಳೆಯರು ರೇಷನ್ ಕಾರ್ಡ್ ಹಿಡಿದು ತಿದ್ದುಪಡಿಗಾಗಿ ಗಂಟೆಗಟ್ಟಲೇ ನಿಲ್ಲುತ್ತಿದ್ದಾರೆ.
ಬ್ಯಾಂಕ್‍ಗಳ ಮುಂದೆ ಸರತಿ ಸಾಲು: ಅಧಿಕ ಮಂದಿ ಮಹಿಳೆಯರು ಈ ಹಿಂದೆ ಬ್ಯಾಂಕ್‍ಗಳಲ್ಲಿ ಅಕೌಂಟ್ ಮಾಡಿಸಿದ್ದರು ಆದರೆ ಅದು ಕಾಲಾನಂತರ ನಿಷ್ಕ್ರೀಯವಾಗಿತ್ತು. ಇದೀಗ ಗೃಹ ಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆಯಾಗಲಿರುವ ಹಿನ್ನೆಲೆ ಬ್ಯಾಂಕ್ ಖಾತೆಯನ್ನು ಸಕ್ರೀಯ ಮಾಡಿಸಲು ಹಾಗೂ ಹೊಸದಾಗಿ ಖಾತೆ ತೆರೆಯಲು ಪಟ್ಟಣದ ಎಸ್‍ಬಿಎಂ ಸೇರಿದಂತೆ ಹಲವು ಬ್ಯಾಂಕ್ ಗಳ ಮುಂದೆ ಸರತಿ ಸಾಲಿನಲ್ಲಿ ಪ್ರತಿನಿತ್ಯ ಕಾಯುತ್ತಿದ್ದಾರೆ.
ಆಧಾರ್ ಕಾರ್ಡ್‍ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸಲು ಕಳೆದ 4-5 ದಿನಗಳಿಂದಲೂ ತಾಲೂಕು ಕಚೇರಿಗೆ ಅಲೆಯುತ್ತಿದ್ದರೂ ಸಹ ಟೋಕನ್ ಸಿಗುತ್ತಿರಲಿಲ್ಲ. ಈ ಕಾರಣದಿಂದ ಬೇಸತ್ತು ಬುಧವಾರ ರಾತ್ರಿ ಆಧಾರ್ ಸೇವಾ ಕೇಂದ್ರದ ಮುಂದೆ ಮಲಗಿದ್ದೇವೆ.
– ಸಿದ್ದಮ್ಮ, ಬೇರಂಬಾಡಿ.
ಗೃಹ ಲಕ್ಷ್ಮಿಗೆ ಅರ್ಜಿ ಹಾಕಲು ಪಡಿತರ ಕಾರ್ಡ್‍ಗಳಲ್ಲಿ ಯಜಮಾನಿ ಹೆಸರು ಮೊದಲಿಗೆ ಇರಬೇಕು ಎಂಬ ನಿಯಮದ ಕಾರಣ ಆಯಾಯ ನ್ಯಾಯಬೆಲೆ ಅಂಗಡಿಗಳಿಗೆ ತಿದ್ದುಪಡಿಗೆ ಅವಕಾಶ ನೀಡಿದ್ದೇವೆ. ಆದ್ದರಿಂದ ಯಾರು ಕೂಡ ಆಹಾರ ಇಲಾಖೆ ಕಚೇರಿ ಮುಂದೆ ಬಂದು ನಿಲ್ಲುವುದು ಬೇಡ. ನಿಮ್ಮ ನಿಮ್ಮ ನ್ಯಾಯಬೆಲೆ ಅಂಗಡಿಗಳಲ್ಲೇ ಪಡಿತರದಾರರು ತಿದ್ದುಪಡಿ ಮಾಡಿಸಿಕೊಳ್ಳಿ.
– ರಮೇಶ್, ಆಹಾರ ನಿರೀಕ್ಷಕ, ಗುಂಡ್ಲುಪೇಟೆ.