Friday, April 18, 2025
Google search engine

Homeರಾಜ್ಯಸುದ್ದಿಜಾಲಗುಂಡ್ಲುಪೇಟೆ: ಪಡಿತರ ಚೀಟಿ ತಿದ್ದುಪಡಿಗಾಗಿ ಮುಗಿಬಿದ್ದ ಜನರು

ಗುಂಡ್ಲುಪೇಟೆ: ಪಡಿತರ ಚೀಟಿ ತಿದ್ದುಪಡಿಗಾಗಿ ಮುಗಿಬಿದ್ದ ಜನರು

ಗುಂಡ್ಲುಪೇಟೆ: ಪಡಿತರ ಚೀಟಿ ತಿದ್ದುಪಡಿಗಾಗಿ ಪಟ್ಟಣದ ತಾಲೂಕು ಕಚೇರಿಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಕಚೇರಿ ಮುಂದೆ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಮಂದಿ ಪಡಿತರದಾರರು ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಸೋಮವಾರ ನಿರ್ಮಾಣವಾಗಿತ್ತು.

ಕಾಂಗ್ರೆಸ್ ಸರ್ಕಾರದ ಗೃಹಲಕ್ಷಿ ಯೋಜನೆಗೆ ಅರ್ಜಿ ಹಾಕಲು ತಾಯಿ ಅಥವಾ ಪತ್ನಿ ಕುಟುಂಬದ ಮುಖ್ಯಸ್ಥೆಯಾಗಿರಬೇಕು ಎಂಬ ನಿಯಮವಿರುವ ಕಾರಣ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಕಚೇರಿ ಮುಂದೆ ಪಡಿತರದಾರರು ಬೆಳ್ಳಂಬೆಳಗ್ಗೆಯೇ ಆಗಮಿಸಿ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ 11 ಗಂಟೆ ವೇಳೆ ನೂರಾರು ಮಂದಿ ಒಮ್ಮೆಲೆ ಜಮಾಯಿಸಿದ ಕಾರಣದಿಂದ ಗೊಂದಲದ ಗೂಡಾಯಿತು. ಜನ ಜಗುಳಿ ಹೆಚ್ಚಿದ್ದ ಕಾರಣದಿಂದ ಅಧಿಕಾರಿಗಳು ಕಚೇರಿ ಬಾಗಿಲು ಬಂದ್ ಮಾಡಿ ಕಿಟಕಿ ಮೂಲಕ ಅರ್ಜಿ ಸ್ವೀಕರಿಸಿದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹೈರಾಣಾದರು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ ಮೊದಲೇ ಸೌಲಭ್ಯ ಪಡೆಯಬೇಕು ಎಂಬ ಉದ್ದೇಶದಿಂದ ಹಲವು ಮಂದಿ ಬೆಳಗ್ಗೆ 8 ಗಂಟೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಕಚೇರಿ ಮುಂದೆ ತಿಂಡಿ, ಊಟ ಮಾಡದೆ ಸಾಲಿನಲ್ಲಿ ಕಾದು ನಿಂತಿದ್ದರು. ಈ ಮಧ್ಯೆ ಜನರು ನಡುವೆ ನೂಕಾಟ ತಳ್ಳಾಟವು ಸಹ ನಡೆಯಿತು. ಈ ಸಂದರ್ಭ ಗೊಂದಲ ಸೃಷ್ಟಿಯಾಯಿತು. ನಂತರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮಧ್ಯೆ ಪ್ರವೇಶಿಸಿ ಜನರನ್ನು ಸಮಾಧಾನ ಪಡಿಸಿದರು. ಕೆಲವರು ಮಕ್ಕಳ ಸಮೇತ ಆಗಮಿದ್ದ ಕಾರಣ ತಾಯಿ ಮತ್ತು ಮಕ್ಕಳು ಪರದಾಡುವಂತಾಯಿತು.

ಪಡಿತರ ಚೀಟಿ ತಿದ್ದುಪಡಿಗಾಗಿ ಪಡಿತ ಕಾರ್ಡ್, ಆಧಾರ್ ಕಾರ್ಡ್ ನಕಲು ಪ್ರತಿ ಸಲ್ಲಿಸಬೇಕಾಗಿರುವ ಕಾರಣ ಪಟ್ಟಣದ ವಿವಿಧ ಜೆರಾಕ್ಸ್ ಅಂಗಡಿಗಳ ಮುಂದೆಯೂ ಸಹ ಜನ ಜಂಗುಳಿ ಕಂಡು ಬಂತು. ಮಾಲೀಕರು ಹಾಗೂ ಕೆಲಸಗಾರರು ಎಲ್ಲರು ಜೆರಾಕ್ಸ್ ಮಾಡುವ ಮೂಲಕ ಜನ ಸಂದಣಿ ತಗ್ಗಿಸಿದರು. ಇದರಿಂದ ಜೆರಾಕ್ಸ್ ಅಂಗಡಿಗಳಿಗೂ ಸಹ ಉತ್ತಮ ಆದಾಯವಾಯಿತು.

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ನಾಡ ಕಚೇರಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜನರು ಸಾಲುಗಟ್ಟಿ ನಿಂತಿದ್ದರು

ತೆರಕಣಾಂಬಿ ನಾಡಕಚೇರಿಯಲ್ಲೂ ಜನ ಸಂದಣಿ

ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿರುವ ಕಾರಣ ತಿದ್ದುಪಡಿಗಾಗಿ ತೆರಕಣಾಂಬಿ ನಾಡ ಕಚೇರಿ ಮುಂದೆ ಮಹಿಳೆಯರು ಮತ್ತು ಮಕ್ಕಳು ಸಾಲುಗಟ್ಟಿ ನಿಂತಿದ್ದರು.
ನಾಡ ಕಚೇರಿಗೆ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಜೋಡಣೆ, ವಿಳಾಸ ತಿದ್ದುಪಡಿ, ಆಧಾರ್ ಅಪ್ ಡೇಟ್ ಮತ್ತು ಹೆಬ್ಬೆಟ್ಟಿನ ಗುರುತು ನೀಡಲು ಅಧಿಕ ಜನರು ಬಂದ ಕಾರಣ ಕೆಲಕಾಲ ನೂಕು ನುಗ್ಗಲು ಉಂಟಾಯಿತು.

ಮತ್ತೊಂದು ಕೌಂಟರ್ ತೆರೆಯಲು ಒತ್ತಾಯ: ಆಧಾರ್ ತಿದ್ದುಪಡಿಗಾಗಿ ಪ್ರತಿನಿತ್ಯ ನೂರಾರು ಮಂದಿ ಸಾರ್ವಜನಿಕರು ನಾಡ ಕಚೇರಿಗೆ ಆಗಮಿಸುತ್ತಿರುವುದರಿಂದ ಗಂಟೆಗಟ್ಟಲೇ ಕಾಯುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತೊಂದು ಕೌಂಟರ್ ತೆರೆಯುವ ಮೂಲಕ ಜನದಟ್ಟಣೆ ಕಡಿಮೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮಹಿಳೆಯರು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular