ಗುಂಡ್ಲುಪೇಟೆ: ಪಟ್ಟಣದ ಪೊಲೀಸ್ ಠಾಣೆ ಮುಂಭಾಗ ಅಧಿಕ ಭಾರ ಹೊತ್ತ ಹಾಗೂ ನೋಂದಣಿ ಸಂಖ್ಯೆ ಇಲ್ಲದ ಟ್ರ್ಯಾಕ್ಟರ್ ಗಳು ಹಾಗೂ ಲಾರಿಗಳು ಪ್ರತಿನಿತ್ಯ ಹತ್ತಾರು ಬಾರಿ ಸಂಚಾರ ಮಾಡುತ್ತಿದ್ದರೂ ಸಹ ಪೊಲೀಸರು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಡಹಳ್ಳಿ ರಸ್ತೆಯಲ್ಲಿ ಪ್ರತಿನಿತ್ಯ ಎಂ.ಸ್ಯಾಂಡ್, ಜಲ್ಲಿ ಕಲ್ಲು ತುಂಬಿದ ಟ್ರ್ಯಾಕ್ಟರ್ ಗಳು ಹಾಗೂ ಲಾರಿಗಳು ಮೇಲೊದಿಕೆ ಇಲ್ಲದೆ ಸಂಚಾರ ಮಾಡುತ್ತಿದೆ. ಇದರಿಂದ ಹಿಂಬದಿಯಲ್ಲಿ ಬರುವ ಬೈಕ್ ಸವಾರರು ಹಾಗೂ ಪಾದಚಾರಿಗಳಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಇನ್ನೂ ನಿಗಧಿಗಿಂತ ಹೆಚ್ಚಿನ ಜಲ್ಲಿಕಲ್ಲು ತುಂಬಿದ ಟ್ರ್ಯಾಕ್ಟರ್ ಹಳ್ಳಕ್ಕೆ ಬಿದ್ದ ಸಂದರ್ಭ ಜಲ್ಲಿ ರಸ್ತೆ ಮೇಲೆ ಬೀಳುತ್ತಿದೆ. ಇದರಿಂದ ಸಂಚಾರಕ್ಕೆ ಮತ್ತಷ್ಟು ಸಮಸ್ಯೆಯಾಗುತ್ತಿದೆ.
ಮುಖ್ಯ ರಸ್ತೆಯಲ್ಲಿ ಹೆಲ್ಮೆಟ್ ಹಾಕದೆ ಸಂಚರಿಸುವ ವಾಹನ ಸವಾರರನ್ನು ತಡೆದು ದಂಡ ವಿಧಿಸುವ ಪೊಲೀಸರು ಠಾಣೆ ಮುಂದೆಯೆ ಓವರ್ ಲೋಡ್ ಹೊತ್ತು ಸಂಚರಿಸುವ ಟ್ರ್ಯಾಕ್ಟರ್ ಹಾಗೂ ಲಾರಿಗಳನ್ನು ಏಕೆ ತಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಲಾರಿ ಹಾಗೂ ಟ್ರಾಕ್ಟರ್ ನಲ್ಲಿ ಸಾಗಿಸುವ ಏಜೆಂಟ್ ಗಳ ಜೊತೆ ಪೋಲೀಸ್ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂಬ ಅನುಮಾನವು ವ್ಯಕ್ತವಾಗಿದೆ.
ಈ ಬಗ್ಗೆ ಪೊಲೀಸ್ ಇನ್ಸ್ಪೆಕ್ಟರ್ ಕೂಡಲೇ ಕ್ರಮ ವಹಿಸಬೇಕೆಂದು ಪುರಸಭೆ ಸದಸ್ಯ ರಾಜಗೋಪಾಲ್ ಹಾಲಹಳ್ಳಿ ಒತ್ತಾಯಿಸಿದ್ದಾರೆ.