Thursday, January 29, 2026
Google search engine

Homeರಾಜ್ಯBMTC ಬಸ್ ಗಳಲ್ಲಿ ಗುಟ್ಕಾ ಜಾಹೀರಾತು: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

BMTC ಬಸ್ ಗಳಲ್ಲಿ ಗುಟ್ಕಾ ಜಾಹೀರಾತು: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೆಂಗಳೂರು : ನಗರದ ಬಿಎಂಟಿಸಿ ಬಸ್ ಗಳ ಮೇಲೆ ಗುಟ್ಕಾ ಜಾಹೀರಾತುಗಳು ರಾರಾಜಿಸುತ್ತಿದ್ದು, ಇದರ ವಿರುದ್ಧ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಸಮರ ಸಾರಿದ್ದಾರೆ. ಅಲ್ಲದೆ ಬಸ್ ಗಳ ಮೇಲೆ ಹಾಕಲಾಗಿರುವ ಜಾಹೀರಾತು ಚಿತ್ರಗಳನ್ನು ಕಿತ್ತೆಸೆಯುತ್ತಿರುವ ಕನ್ನಡಪರ ಹೋರಾಟಗಾರರು, ಇಂತಹ ಅನಾರೋಗ್ಯಕರ ವಸ್ತುಗಳನ್ನು ಪ್ರೋತ್ಸಾಹಿಸುವುದು ಎಷ್ಟು ಸರಿ? ಇವುಗಳನ್ನು ತಿಂದು ಜನರು ಬಸ್ ನಿಲ್ದಾಣಗಳು, ಮೆಟ್ರೋ ಸ್ಟೇಷನ್‌ಗಳು ಮತ್ತು ಪ್ರಮುಖ ವೃತ್ತಗಳಲ್ಲಿ ಉಗಿದು ನಗರದ ಅಂದವನ್ನು ಹಾಳು ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ಇನ್ನೂ ಈ ಬೆಳವಣಿಗೆ ಕುರಿತು ಸಚಿವ ರಾಮಲಿಂಗಾ ರೆಡ್ಡಿಯವರು ಸ್ಪಷ್ಟನೆ ನೀಡಿದ್ದು, ಪ್ರಸ್ತುತ ಜಾರಿಯಲ್ಲಿರುವ ನಿಯಮಗಳು ಬಸ್‌ನ ಹೊರ ಭಾಗದ ಶೇಕಡಾ 40 ರಷ್ಟು ಮಾತ್ರ ಜಾಹೀರಾತುಗಳನ್ನು ಅನುಮತಿಸುತ್ತವೆ. ಆದರೆ, ಕೆಲವು ಬಸ್‌ಗಳಲ್ಲಿ ಸಂಪೂರ್ಣವಾಗಿ ಜಾಹೀರಾತು ಹಾಕಲಾಗಿದ್ದು, ಇದರಿಂದ ನಿಯಮ ಉಲ್ಲಂಘನೆಯಾಗಿವೆ ಎಂದು ಹೇಳಿದ್ದಾರೆ.

ಈ ಬಗ್ಗೆ 2 ತಿಂಗಳ ಹಿಂದೆಯೇ ಸೂಚನೆಗಳನ್ನು ನೀಡಲಾಗಿದ್ದು, ಬಸ್‌ನ ಹೊರಭಾಗದ ಶೇಕಡಾ 40 ರಷ್ಟು ಜಾಗವನ್ನು ಮಾತ್ರ ಜಾಹೀರಾತುಗಳಿಗೆ ಬಳಸಬೇಕೆಂದು ನಿರ್ದೇಶಿಸಿದ್ದೇನೆ. ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಹೆಚ್ಚಿನ ಜಾಗ ಬಳಕೆಗೆ ಪೂರ್ವಾನುಮತಿ ಅಗತ್ಯವಿದೆ ಎಂದು ತಿಳಿಸಿದ್ದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಸಾರ್ವಜನಿಕ ಕಳವಳವನ್ನು ಒಪ್ಪಿಕೊಂಡ ಅವರು, ಬಿಎಂಟಿಸಿ ಒಂದಕ್ಕೇ ಜಾಹೀರಾತುಗಳಿಂದ ವಾರ್ಷಿಕ ಸುಮಾರು 60 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಕೆಎಸ್‌ಆರ್‌ಟಿಸಿ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗಳಿಗೂ ಇದು ದೊಡ್ಡ ಮಟ್ಟದ ಆದಾಯದ ಮೂಲವಾಗಿದೆ ಎಂದರು.

ಬಳಿಕ ಗುಟ್ಕಾ ನಿಷೇಧದ ಬಗ್ಗೆ ಮಾತನಾಡಿದ ಸಚಿವರು, ಒಂದು ವೇಳೆ ಗುಟ್ಕಾ ಉತ್ಪನ್ನಗಳು ಕೆಟ್ಟದ್ದಾಗಿದ್ದರೆ ಕೇಂದ್ರ ಸರ್ಕಾರ ದೇಶವ್ಯಾಪ್ತಿ ಅವುಗಳನ್ನು ನಿಷೇಧ ಮಾಡಲಿ. ನಾವು ಗುಟ್ಕಾ ನಿಷೇಧಕ್ಕಾಗಿ ಹೋರಾಟ ಮಾಡಬೇಕೋ ಅಥವಾ ಬಸ್ ಮೇಲಿನ ಸ್ಟಿಕ್ಕರ್ ಬಗ್ಗೆಯೋ? ಮೊದಲು ನಿಷೇಧ ಜಾರಿಯಾಗಲಿ, ಆಗ ಜಾಹೀರಾತುಗಳು ತಾನಾಗಿಯೇ ನಿಲ್ಲುತ್ತವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪೀಕ್ ಅವರ್‌ನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಿರುವ ಬಗ್ಗೆ ಮಾತನಾಡಿ, ಪೀಕ್ ಅವರ್‌ನಲ್ಲಿ ಹೆಚ್ಚಿನ ಬಸ್‌ಗಳನ್ನು ಓಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular