ಹಾಸನ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಪ್ತ, ಮಾಜಿ ಎಂ ಎಲ್ ಸಿ ಪಟೇಲ್ ಶಿವರಾಮ್ (75) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಪಟೇಲ್ ಶಿವರಾಂ 2010-2016ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ದೇಶಕ, ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ಪಟೇಲ್ ಶಿವರಾಂ ಕಾರ್ಯನಿರ್ವಹಿಸಿದ್ದರು. ಹಾಸನ ನಗರದ ಹೌಸಿಂಗ್ ಬೋರ್ಡ್ ನಿವಾಸದಲ್ಲಿ ಇಂದು ಬೆಳಿಗ್ಗೆ ಪಟೇಲ್ ಶಿವರಾಮ್ ನಿಧನರಾಗಿದ್ದಾರೆ. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
ಪಟೇಲ್ ಶಿವರಾಮ್ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಸಂತಾಪ ಸೂಚಿಸಿದ್ದು, ಮಾಜಿ ವಿಧಾನ ಪರಿಷತ್ ಸದಸ್ಯರು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರು ಹಾಗು ಜೆಡಿಎಸ್ ಪಕ್ಷದ ಹಾಸನದ ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ಪಟೇಲ್ ಶಿವರಾಂ ಅವರು ಹೃದಯಾಘಾತದಿಂದ ನಿಧನರಾದ ವಿಷಯ ಅತೀವ ದುಃಖವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ತೀವ್ರ ಸಂತಾಪ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.