ವರದಿ: ಎಡತೊರೆ ಮಹೇಶ್
ಎಚ್.ಡಿ. ಕೋಟೆ: ಪಟ್ಟಣದ ಸೈಂಟ್ ಮೇರಿಸ್ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ನಿರ್ಲಕ್ಷದಿಂದ ಆರು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ.
ತಾಲೂಕಿನ ಬೆಳಗನಹಳ್ಳಿ ಗ್ರಾಮದ ಶಿವರಾಜು -ಕವಿತಾ ದಂಪತಿಗಳ ದ್ವಿತೀಯ ಪುತ್ರಿ ಒಂದನೇ ತರಗತಿ ಓದುತ್ತಿದ್ದ ತನುಷ ಮೃತ ಮಗು. ಭಾನುವಾರ ರಾತ್ರಿ ಮಗು ವಾಂತಿ ಮಾಡಿಕೊಂಡ ಹಿನ್ನೆಲೆ ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ತೆರಳಿದ್ದ ಸಂದರ್ಭದಲ್ಲಿ ಮಕ್ಕಳ ವೈದ್ಯರಿಲ್ಲದ ಕಾರಣ ಸೈಂಟ್ ಮೇರಿಸ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಪೋಷಕರು ದಾಖಲಿಸಿದ್ದಾರೆ.
ಈ ವೇಳೆ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯರಾದ ದೀಪಕ್ ರವರು ಮಗುವನ್ನ ಪರೀಕ್ಷೆ ನಡೆಸಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ನಂತರ ಚಿಕಿತ್ಸೆಯನ್ನು ಸಹ ನೀಡಿದ್ದಾರೆ. ಈ ವೇಳೆ ರಕ್ತ ಪರೀಕ್ಷೆಯ ಅವಶ್ಯಕತೆ ಇದೆ ಎಂದು ರಕ್ತ ಪರೀಕ್ಷೆಗೆ ಮಗುವನ್ನು ಒಳಪಡಿಸಿದ್ದರು ,ನಂತರ ರಕ್ತ ಪರೀಕ್ಷೆಯ ವಿವರ ಬೆಳಗ್ಗೆಗೆ ಬರಲಿದೆ ಅಲ್ಲಿಯವರೆಗೂ ವಾರ್ಡ್ನಲ್ಲಿ ದಾಖಲಿಸುವಂತೆ ವೈದ್ಯರ ಸೂಚನೆ ಮೇರೆಗೆ ಪೋಷಕರು ಮಗುವನ್ನ ದಾಖಲಿಸಿದ್ದರು.
ಬೆಳಗ್ಗಿನ ವೇಳೆಗೆ ಮಗು ಲವಲವಿಕೆಯಿಂದ ಇದ್ದುದ್ದನ್ನ ಪೋಷಕರು ಗಮನಿಸಿ ಮಗು ಆರೋಗ್ಯವಾಗಿ ಇದೆ ಎಂದು ಭಾವಿಸಿದ್ದರು. ಪೋಷಕರು ಬೆಳಗ್ಗಿನ ಉಪಹಾರ ತರಲು ಮನೆಗೆ ತೆರಳಿದ್ದ ಸಂದರ್ಭದಲ್ಲಿ ಮಗು ಸಾವನ್ನಪ್ಪಿದೆ, ಇದರಿಂದ ಕುಪಿತಗೊಂಡ ಪೋಷಕರು ಆರೋಗ್ಯವಾಗಿದ್ದ ಮಗು ಏಕಾಏಕಿ ಸಾವನ್ನಪ್ಪಲು ಆಸ್ಪತ್ರೆ ವೈದ್ಯರು ಮತ್ತು ಆಡಳಿತ ಸಿಬ್ಬಂದಿಯೇ ಕಾರಣ ಎಂದು ದೂರಿದರು.
ವಿಷಯ ತಿಳಿಯುತ್ತಿದ್ದಂತೆ ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್ ಆಸ್ಪತ್ರೆಗೆ ತೆರಳಿ ಆಗಿರುವ ಘಟನೆಯ ಬಗ್ಗೆ ವಿವರವನ್ನು ಪಡೆದರು. ನಂತರ ಮಾತನಾಡಿದ ಅವರು ಮಕ್ಕಳ ವೈದ್ಯರಿಲ್ಲದೆ ರಾತ್ರಿ ಪಾಳಿಯಲ್ಲಿದ್ದ ವೈದ್ಯರು ಮಗುವನ್ನು ಚಿಕಿತ್ಸೆ ನೀಡಿದ್ದು ಕಂಡುಬಂದಿದೆ. ಅಲ್ಲದೆ ಬೆಳಗ್ಗಿನ ವೇಳೆ ಮಕ್ಕಳ ವೈದ್ಯರು ತೆರಳಿ ಪರಿಶೀಲನೆ ನಡೆಸದೆ ಪ್ರಮಾದವನ್ನ ಎಸಗಿದ್ದಾರೆ, ಇದರಿಂದಾಗಿ ಮಗು ಸಾವನ್ನಪ್ಪಿರಬಹುದು, ಆದ್ದರಿಂದ ಸಂಬಂಧಪಟ್ಟ ವೈದ್ಯರ ವಿರುದ್ಧ ಹಾಗೂ ಮಕ್ಕಳ ತಜ್ಞರ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರನ್ನು ನೀಡುವುದಲ್ಲದೆ ಸೂಕ್ತ ತನಿಖೆಗೆ ಆಗ್ರಹಿಸಲಾಗುವುದು. ಅಲ್ಲದೆ ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ಪೋಷಕರ ಆಕ್ರಂದನ:
ಮಗು ಮೃತಪಟ್ಟ ಹಿನ್ನೆಲೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆಸ್ಪತ್ರೆಯ್ಯಾದ್ಯಂತ ಪೋಷಕರ ಹಾಗೂ ಸಂಬಂಧಿಕರ ಕೂಗಾಟ ಕೇಳುತ್ತಿತ್ತು. ಆರೋಗ್ಯವಾಗಿದ್ದ ಮಗು ಏಕಾಏಕಿ ಸಾವನ್ನಪ್ಪಲು ಕಾರಣವೇನು? ಈ ಹಿಂದೆ ಇದೇ ರೀತಿ ಪ್ರಕರಣಗಳು ನಡೆದಿದ್ದರೂ ಸಹ ಎಚ್ಚೆತ್ತುಕೊಳ್ಳದೆ ನಮ್ಮ ಮಗುವಿನ ಪ್ರಾಣವನ್ನ ಬಲಿಪಡಿಸಿದ್ದಾರೆ. ಈ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ನನ್ನ ಮಗಳ ಸಾವಿಗೆ ಕಾರಣ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರಕರಣವನ್ನು ದಾಖಲಿಸಲಾಗುವುದು ಅಲ್ಲದೆ ತಾಲೂಕು ಆರೋಗ್ಯ ಅಧಿಕಾರಿಗಳಿಗೂ ಸಹ ತನಿಖೆ ನಡೆಸುವಂತೆ ಲಿಖಿತ ರೂಪದಲ್ಲಿ ಮನವಿಯನ್ನ ಸಲ್ಲಿಸಲಾಗುವುದು, ಖಾಸಗಿ ಆಸ್ಪತ್ರೆಗಳು ಹಣದ ಹಿಂದೆ ಬಿದ್ದು ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ, ನನ್ನ ಮಗಳ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಕಾನೂನಿನಾತ್ಮಕವಾಗಿ ಹೋರಾಟ ನಡೆಸಲಾಗುವುದು, ನನ್ನ ಮಗಳ ಸಾವಿಗೆ ನ್ಯಾಯ ಒದಗಿಸಲು ಹೋರಾಟ ನಡೆಸುತ್ತೇನೆ ಎಂದು ಮೃತಪಟ್ಟ ಮಗುವಿನ ತಂದೆ ಶಿವರಾಜು ತಿಳಿಸಿದರು.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜಮೀನನ್ನೇ ಮಾರಿದ್ದ ಪೋಷಕರು:
ಮೃತ ತನುಷಾ ತಂದೆ ಮತ್ತು ಅವರ ಇಬ್ಬರು ಸಹೋದರರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಬಳಿ ಇದ್ದ ಒಂದು ಎಕರೆ ಜಮೀನನ್ನ ಈಚೆಗೆ ಮಾರಾಟ ಮಾಡಿದ್ದರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜಮೀನನ್ನೇ ಮಾರಾಟ ಮಾಡಿ ಮಕ್ಕಳ ಇಚ್ಚೆಗೆ ಅನುಗುಣವಾಗಿ ಮತ್ತು ಮಕ್ಕಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿತ್ತು, ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಮಗುವಿನ ಮರಣದಿಂದಾಗಿ ಜೀವನ ಉತ್ಸಾಹವನ್ನೇ ಕಳೆದುಕೊಳ್ಳುವ ಸ್ಥಿತಿ ಉದ್ಭವವಾಗಿದೆ ಎಂದು ಪೋಷಕರು ದೂರಿದ್ದಾರೆ.
ಮಗುವಿನ ಸಾವಿನ ಸುದ್ದಿ ಕಾಗಿತ್ತಿನಂತೆ ಹರಡುತ್ತಿದ್ದಂತೆ ಬೆಳಗನಹಳ್ಳಿ ಗ್ರಾಮಸ್ಥರು ಆಸ್ಪತ್ರೆಗೆ ಆಗಮಿಸಿ ಆಸ್ಪತ್ರೆಯ ವಿರುದ್ಧ ಶಾಪ ಹಾಕುತ್ತಿದ್ದುದು ಕಂಡು ಬಂತು. ಮಗು ಸಾವನ್ನಪ್ಪಿದ ಹಿನ್ನೆಲೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಪೋಷಕರು ವೈದ್ಯರ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಭಟಿಸಲು ಮುಂದಾದರು ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ಮತ್ತು ಪೊಲೀಸರು ತಪ್ಪಿಸಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.