ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಒಂಬತ್ತು ವರ್ಷಗಳ ಬಳಿಕ ಪಟ್ಟಣದಲ್ಲಿ ಐತಿಹಾಸಿಕ ಶ್ರೀವಾರಾಹಿ ಮತ್ತು ಶ್ರೀ ಮಾರಮ್ಮನವರ ಜಾತ್ರಾ ಹಾಗೂ ಕೊಂಡೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮೂರು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ಪಟ್ಟಣದ ಎಲ್ಲ ಜನಾಂಗದವರು ಸಕಲ ಸಿದ್ಧತೆಯಲ್ಲಿ ಕೈಗೊಂಡಿದ್ದರು. ಹಬ್ಬದ ಪ್ರಯುಕ್ತ ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಕೊಂಡೋತ್ಸವಕ್ಕೆ ನೂರೊಂದು ಗಾಡಿಗಳ ಕಗ್ಗಲಿ ಸೌದೆಗಳನ್ನು ದೇವಾಲಯದ ಮುಂಭಾಗದಲ್ಲಿ ತಂದು ಮಂಗಳವಾರ ರಾತ್ರಿ10 ಗಂಟೆ ಸುಮಾರಿನಲ್ಲಿ ಸೌದೆಗಳಿಗೆ ಮಹಾಮಂಗಳಾರತಿ ನೆರವೇರಿಸಿ ಅಗ್ನಿ ಸ್ಪರ್ಶ ಮಾಡಲಾಯಿತು.

ಬುಧವಾರ ಬೆ.11ಗಂಟೆಯಲ್ಲಿ ಪಟ್ಟಣದ ದೇವರ ಗುಡ್ಡಪ್ಪನವರು ಕೊಂಡ ಹಾಯುವ ಮೂಲಕ ಒಂಬತ್ತು ವರ್ಷಗಳ ನಂತರ ನಡೆದ ಜಾತ್ರೆಯು ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಶ್ರೀಮಾರಮ್ಮನವರ ಕೊಂಡೋತ್ಸವವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲ ಗ್ರಾಮಗಳಿಂದ ಭಕ್ತಸಾಗರವೇ ದೇವಾಲಯದ ಮುಂಭಾಗ ನೆರದಿದ್ದರು.

ದಾನಿಗಳು ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಿಕೊಟ್ಟರು. ಹೆಚ್.ಡಿ.ಕೋಟೆ ಪೊಲೀಸ್ ಇನ್ಸ್ಪೆಕ್ಟರ್ ಗಾಂಗಾಧರ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.