ಎಚ್.ಡಿ.ಕೋಟೆ: ಪಟ್ಟಣ ಸಮೀಪದ ಡ್ರೈವರ್ ಕಾಲೋನಿ ಸಮೀಪ 7 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಒಂದು ವಾರದ ಅಂತರದಲ್ಲಿ ಇದೇ ಸ್ಥಳದಲ್ಲಿ ಎರಡು ಗಂಡು ಚಿರತೆಗಳು ಬೋನಿಗೆ ಬಂಧಿಯಾಗಿದ್ದವು. ಈಗ ಮೂರನೇ ಚಿರತೆ ಸಿಕ್ಕಿರುವುದರಿಂದ ಇನ್ನಷ್ಟು ಚಿರತೆಗಳು ಇರುವ ಶಂಕೆಯೊಂದಿಗೆ ರೈತರು ಸೇರಿದಂತೆ ಸಾರ್ವಜನಕರು ಆತಂಕಕ್ಕೀಡಾಗಿದ್ದಾರೆ.
ರೈತ ರಾಮಕೃಷ್ಣ ಅವರ ಜಮೀನಿನಲ್ಲಿ ಕೋಟೆ ವಲಯ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಚಿರತೆ ಸಿಕ್ಕಿದೆ.
ಕಳೆದ ಒಂದು ವಾರದ ಹಿಂದೆ ಸಮೀಪದ ಜಮೀನಿನ ರೈತ ಗುಂಡು ಮಲ್ಲು ಅವರ ಜಮೀನಿನಲ್ಲಿ ಮೊದಲಿಗೆ 5 ವರ್ಷದ ಗಂಡು ಚಿರತೆ ಹಾಗೂ ಮುಂದಿನ ಮೂರು ದಿನಗಳ ನಂತರ ಮತ್ತೊಂದು ಚಿರತೆ ಬೋನಿಗೆ ಬಿದ್ದಿತ್ತು. ಇದೀಗ ಬೃಹತ್ ಗಾತ್ರದ ಏಳು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿರುವುದರಿಂದ ಇನ್ನಷ್ಟು ಕಾಡುಪ್ರಾಣಿಗಳು ಇರುವ ಶಂಕೆಯೊಂದಿಗೆ ಅಕ್ಕ-ಪಕ್ಕದ ಜಮೀನಿನ ರೈತರು ಸೇರಿದಂತೆ ಸಮೀಪದ ಗ್ರಾಮಸ್ಥರುಗಳು ಹೆಚ್ಚಿನ ಆತಂಕಕ್ಕೀಡಾಗಿದ್ದಾರೆ.