ಬೆಂಗಳೂರು: ಮಹಿಳೆ ಅಪಹರಣ ಹಾಗೂ ಅಕ್ರಮ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಅವರ ಆಪ್ತ ಸತೀಶ್ ಬಾಬಣ್ಣಗೆ ೮ ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನಗರದ ನ್ಯಾಯಾಲಯವೊಂದು ಆದೇಶ ನೀಡಿದೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಪಹರಣ ಪ್ರಕರಣದಲ್ಲಿ ಸತೀಶ್ ಬಾಬಣ್ಣ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ ವಿಶೇಷ ತನಿಖಾ ತಂಡ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಮನವಿ ಮಾಡಿತು.
ಸಂತ್ರಸ್ತೆಯ ೨೦ ವರ್ಷದ ಮಗ ಮೈಸೂರಿನಲ್ಲಿ ಕೆ.ಆರ್. ನಗರದಲ್ಲಿ ದಾಖಲಿಸಿದ್ದ ದೂರಿನ ಆಧಾರದ ಮೇಲೆ ಬಾಬಣ್ಣ ಅವರನ್ನು ಬಂಧಿಸಲಾಗಿತ್ತು. ಆಕೆಯ ಬಂಧನದ ನಂತರ ತನ್ನ ತಾಯಿಗೆ ಜೀವ ಬೆದರಿಕೆಯಿದೆ ಎಂದು ಅವರು ಹೇಳಿದ್ದರು. ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಬಂದರೆ ಆಕೆಯನ್ನು ಬಂಧಿಸಬಹುದು ಎಂದು ಹೇಳಿ ಸತೀಶ್ ಬಾಬಣ್ಣ ತನ್ನ ತಾಯಿಯನ್ನು ಬೈಕ್‌ನಲ್ಲಿ ಕರೆದೊಯ್ದಿದ್ದರು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯರ ವಿಡಿಯೋ ವೈರಲ್ ಆದ ಬಳಿಕ ಅದರಲ್ಲಿ ಸಂತ್ರಸ್ತೆ ಗುರುತು ಪತ್ತೆಯಾದ ನಂತರ ದೂರು ದಾಖಲಾಗಿತ್ತು.