ಮೈಸೂರು: ಬಿಜೆಪಿ ಎಂಎಲ್‌ಸಿ ಎಚ್. ವಿಶ್ವನಾಥ್ ಕೂಡ ಮುಡಾದಿಂದ ಬದಲಿ ನಿವೇಶನ ಪಡೆದಿದ್ದಾರೆ. ವಿಶ್ವನಾಥ್ ಪತ್ನಿ ಶಾಂತಮ್ಮ ಅವರ ಹೆಸರಿನಲ್ಲಿ ೨೦೧೭ರಲ್ಲಿ ೬೦೪೦ ಅಳತೆಯ ಬದಲಿ ನಿವೇಶನ ಪಡೆದಿದ್ದಾರೆ ಎಂದು ಮುಡಾ ಅಧ್ಯಕ್ಷ ಕೆ.ಮರೀಗೌಡ ಹೇಳಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ದೇವನೂರು ೩ನೇ ಹಂತದ ಬದಲು ಮುಖ್ಯರಸ್ತೆಯಲ್ಲಿ ಎಚ್.ವಿಶ್ವನಾಥ್ ನಿವೇಶನ ಪಡೆದಿದ್ದಾರೆ. ವಿಶ್ವನಾಥ್ ಅವರು ಈಗ ರಾಜಕೀಯವಾಗಿ ದಿವಾಳಿಯಾಗಿದ್ದಾರೆ. ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಮುಡಾದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಇದೀಗ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಹೆಚ್ಚು ಮಾತನಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಖುದ್ದು ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಸಿದ್ದರಾಮಯ್ಯನವರ ವಿರುದ್ಧವೂ ಆರೋಪ ಕೇಳಿಬಂದಿದೆ. ಈಗಾಗಲೇ ರಾಜ್ಯ ಸರ್ಕಾರ, ಈ ಕೇಸ್ ಅನ್ನು ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಗೊಳಪಡಿಸಿದೆ. ಇನ್ನೊಂದು ತಿಂಗಳಲ್ಲಿ ತನಿಖಾ ವರದಿಯು ಸರ್ಕಾರದ ಕೈ ಸೇರಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.