ಹುಣಸೂರು : ಶಾಸಕ ಜಿ.ಡಿ.ಹರೀಶ್ ಗೌಡರಿಂದಾಗಿ ನಗರದ ಟಿಎಪಿಸಿಎಂಎಸ್ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಯಿತು ಎಂದು ನೂತನ ಅಧ್ಯಕ್ಷ ಹಬ್ಬನಕುಪ್ಪೆ ಪ್ರೇಮ್ ಕುಮಾರ್ ತಿಳಿಸಿದರು.
ನಗರದ ಟಿಎಪಿಸಿಎಂಎಸ್ ಕಛೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡು ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ಕೂಡ ಅಧ್ಯಕ್ಷರಾದವರು ಸಂಘದ ಆಸ್ತಿಯಾಗಿ 1. 5 ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿದ್ದು, ಅದೇ ಹಾದಿಯಲ್ಲಿ ಶಾಸಕ ಜಿ.ಡಿ. ಹರೀಶ್ ಗೌಡ ಮತ್ತು ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ಉತ್ತಮಕೆಲಸ ಮಾಡುವುದಾಗಿ ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಶಾಸಕರ ಸಹಕಾರದಿಂದ ಒಮ್ಮತದಿಂದ ಜನತೆ ನಮ್ಮೆಲ್ಲರನ್ನು ಆಯ್ಕೆ ಮಾಡಿದ್ದು , ಅವರ ಮಾರ್ಗದರ್ಶನದಲ್ಲಿ ರೈತರಿಗಾಗಿ ಒಂದು ಸಹಕಾರ ಭವನವನ್ನು ಕಟ್ಟುವ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತೇವೆ. ಅದಕ್ಕೆ ನಿಮ್ಮ ಪರಿಪೂರ್ಣ ಸಹಕಾರವಿರಲಿ ಎಂದರು.
ಉಪಾಧ್ಯಕ್ಷ ಹೊನ್ನಪ್ಪ ಕಾಳಿಂಗ ರಾವ್ ಮಾತನಾಡಿ, ತಾಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಜಿ.ಡಿ.ಹರೀಶ್ ಗೌಡರ ಸಹಕಾರದಿಂದ ಉಪಾಧ್ಯಕ್ಷ ಸ್ಥಾನ ನೀಡಿದ್ದು ನಮ್ಮ ಸಮಾಜದ ಮೇಲಿರುವ ಕಾಳಜಿ ತೋರುತ್ತದೆ ಎಂದರು.
ಮಾಜಿ ಅಧ್ಯಕ್ಷ ಬಸವಲಿಂಗಯ್ಯ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ರೈತರಿಗಾಗಿ ರಸಗೊಬ್ಬರ ಮಾರಾಟದ ಮಳಿಗೆ ಅವಶ್ಯಕತೆ ಇದೆ. ಆದರೆ ದರದ ವ್ಯತ್ಯಾಸದಿಂದ ಗೊಬ್ಬರ ಮಾರಲು ಸಾಧ್ಯವಿಲ್ಲ. ಸರಕಾರದ ನಿಯಮದಂತೆ ನಾವು ಮಾರಲು ಸಾಧ್ಯವಿಲ್ಲದ ಕಾರಣ ರೈತರು ನಮ್ಮಲಿ ಬರುವುದಿಲ್ಲ. ಅವರು ಖಾಸಗಿಯಾಗಿ ಗೊಬ್ಬರ ಖರೀದಿ ಮಾಡುವುದರಿಂದ ನಮ್ಮ ಗೊಬ್ಬರ ಗೋಡಾನ್ ಪಾಲಾಗುತ್ತದೆ ಎಂದರು.
ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಮಂಜುನಾಥ್, ಸಹಾಯಕರಾಗಿ ಗಿರೀಶ್ ಹಾಗೂ ಎಆರ್ ಅನುಸೂಯ ಯಶಸ್ವಿಯಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎ.ಸಿ.ಕೆಂಪೇಗೌಡ, ಜಿ.ಎನ್.ವೆಂಕಟೇಶ್, ರೇವಣ್ಣ, ಇಂದೂ ಕಲಾಶ್ರೀ, ಮಂಗಳ ಗೌರಿ, ಸೋಮಶೇಖರ್, ಹೆಚ್.ಟಿ.ಬಾಬು ಗೋವಿಂದೇಗೌಡ ಇದ್ದರು.



