ಮಂಗಳೂರು(ದಕ್ಷಿಣ ಕನ್ನಡ): ಹಜ್ ನಿರ್ವಹಿಸಲು ಮಕ್ಕಾಕ್ಕೆ ಹೋಗಿರುವ ಯಾತ್ರಿಗಳಿಗೆ ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯಿಂದಾಗಿ ಹಜ್ ಯಾತ್ರೆಗೆ ಹೋದ ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಭಾರತೀಯ ಹಜ್ ಕಮಿಟಿ ವಿರುದ್ಧ ಯಾತ್ರಿಗಳ ಆಕ್ರೋಶ ಹೊರಹಾಕಿದ್ದಾರೆ.
ಹಜ್ ಕಮಿಟಿ ಮೂಲಕ ಹೋದ ಯಾತ್ರಿಕರು ವೀಡಿಯೋ ಮೂಲಕ ಭಾರತೀಯ ಹಜ್ ಕಮಿಟಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲೆಯ ಸುಮಾರು 285 ಮಂದಿ ಬೆಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆ ಮಾಡಿದ್ದರು. ಮದೀನಾದಲ್ಲಿ ನಮಗೆ ಅಷ್ಟೇನೂ ಸಮಸ್ಯೆ ಆಗಲಿಲ್ಲ ಮಕ್ಕಾ ತಲುಪುತ್ತಲೇ ನಮಗೆ ಸಮಸ್ಯೆಗಳು ಎದುರಾದವು. 250 ಮಂದಿ ಉಳಿದುಕೊಳ್ಳುವ ಕಟ್ಟಡದಲ್ಲಿ 387 ಮಂದಿ ಇದ್ದಾರೆ. ನಮಗೆ ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಶುದ್ಧ ನೀರಿಲ್ಲ, ಬಿಸಿ ನೀರು ಕೇಳಿದರೆ ತಣ್ಣೀರು ಕೊಡುತ್ತಾರೆ. ಬಾತ್ ರೂಮ್, ಟಾಯ್ಲೆಟ್ ಕೂಡ ಸರಿ ಇಲ್ಲ. ಹಾಸಿಗೆಯನ್ನು ಬಳಸಲಾರದಷ್ಟು ಕೆಟ್ಟದಾಗಿದೆ. ಸ್ಥಳೀಯ ಹಜ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಪ್ರಯೋಜನ ಆಗಿಲ್ಲ. ತಂಡದಲ್ಲಿ ಮಹಿಳೆಯರು, ಮಕ್ಕಳು, ರೋಗಿಗಳು, ಹಿರಿಯ ನಾಗರಿಕರಿದ್ದಾರೆ. ಅವ್ಯವಸ್ಥೆಯಿಂದ ಯಾತ್ರಿಕರು ರೋಸಿ ಹೋಗಿದ್ದಾರೆ. ಹಲವಾರು ಮಂದಿಯ ಆರೋಗ್ಯ ಹದಗೆಟ್ಟಿದೆ ಎಂದು ವಿಡಿಯೋದಲ್ಲಿ ಹಜ್ ಯಾತ್ರಿಕರು ಅಳಲು ತೋಡಿಕೊಂಡಿದ್ದಾರೆ.