ಜೆಡಿಎಸ್ ಬೆಂಬಲಿತ ಸದಸ್ಯರಿಂದ ಎರಡನೇ ಅವಧಿಗೆ ಅಧಿಕಾರ ಕಸಿದುಕೊಳ್ಳುವಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಫಲ.
ಪಿರಿಯಾಪಟ್ಟಣ: ತಾಲೂಕಿನ ಹಲಗನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮೊದಲ ಅವಧಿಯಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್ ಬೆಂಬಲಿತ ಸದಸ್ಯರಿಂದ ಎರಡನೇ ಅವಧಿಗೆ ಅಧಿಕಾರ ಕಸಿದುಕೊಳ್ಳುವಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಫಲರಾಗಿದ್ದಾರೆ.
ಗುರುವಾರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ವೀಣಾ, ಜೆಡಿಎಸ್ ಬೆಂಬಲಿತ ಸಂತೋಷ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ವೀಣಾ 10 ಮತ ಪಡೆದು ಜಯಗಳಿಸಿದರೆ ಸಂತೋಷ್ 8 ಮತ ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮೀನಾಕ್ಷಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾ ರಿಯಾಗಿ ಹಾರಂಗಿ ಇಲಾಖೆ ಎಇಇ ಲೋಹಿತ್ ಕರ್ತವ್ಯ ನಿರ್ವಹಿಸಿದರು.ಫಲಿತಾಂಶ ಬಳಿಕ ಕಾಂಗ್ರೆಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಚಿವ
ಕೆ.ವೆಂಕಟೇಶ್ ಹಾಗೂ ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ಸಂಭ್ರಮಾಚರಣೆ ಮಾಡಿದರು. ಗ್ರಾಮ ಪಂಚಾಯತಿ ಸದಸ್ಯ ಸುಹೇಲ್ ಪಾಷಾ ಹಾಗೂ ಮುಖಂಡ ಶಂಕರೇಗೌಡ ಮಾತನಾಡಿ ಸಚಿವ ಕೆ.ವೆಂಕಟೇಶ್ ಅವರ ನಾಯಕತ್ವ ಮೆಚ್ಚಿ ಜೆಡಿಎಸ್ ಬೆಂಬಲಿಗ ಸದಸ್ಯರು ಕಾಂಗ್ರೆಸ್ ಸೇರಿದ್ದರಿಂದ ಹಲಗನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದ ಪಾಲಾಗಿದೆ, ಸಚಿವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯತಿ ಎಲ್ಲಾ ಹಳ್ಳಿಗಳ ಅಭಿವೃದ್ಧಿಗೆ ನೂತನ ಅಧ್ಯಕ್ಷ- ಉಪಾಧ್ಯಕ್ಷ ಮತ್ತು ಸದಸ್ಯರೆಲ್ಲರೂ ಶ್ರಮಿಸಲಿ ಎಂದು ಶುಭ ಕೋರಿದರು. ಈ ಸಂದರ್ಭ ಗ್ರಾಮ ಪಂಚಾಯತಿ ಸದಸ್ಯರಾದ ರಫೀಕ್ ಅಹಮದ್, ನಜೀಬ್ ಖಾನ್, ವಸಂತ, ಪದ್ಮ, ನೂರ್ ಅಸ್ಮ, ಸನೂಬಿಯ, ಆರ್.ಟಿ ವೆಂಕಟೇಶ್, ಶಫೀರ್ ಅಹಮದ್, ಸುರೇಶ್, ನಾಗಮ್ಮ, ಕುಮಾರ, ಗೀತಾ, ಪುಟ್ಟಸ್ವಾಮಿಗೌಡ, ವಸಂತ, ಯುವ ಮುಖಂಡ ಮಣಿಕಂಠ, ಪಿಡಿಒ ರವಿಕುಮಾರ್ ಕಾರ್ಯದರ್ಶಿ ಶಿವಣ್ಣ ಹಾಗೂ ಸಿಬ್ಬಂದಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
