ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರವಾಗಿರುವ ಖಾಸಗಿ ಬಡಾವಣೆಗಳನ್ನು ಆಯಾ ವ್ಯಾಪ್ತಿಯ ನಗರ ಸಭೆ ಮತ್ತು ಪಟ್ಟಣ ಪಂಚಾಯ್ತಿಗಳಿಗೆ ಹಸ್ತಾಂತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಡಾ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಸೋಮನಾಥನಗರ, ಆರ್.ಟಿ. ನಗರ, ಸಿದ್ದರಾಮಯ್ಯ ಬಡಾವಣೆ, ಐಶ್ವರ್ಯನಗರ, ಎಸ್.ಬಿ.ಎಂ. ಲೇಔಟ್, ಚಾಮುಂಡಿಬೆಟ್ಟದ ಬಳಿ ಇರುವ ವಿದ್ಯುತ್ ಚಿತಾಗಾರವನ್ನು ಪರಿಶೀಲಿಸಿ ಮಾತನಾಡಿದ ಅವರು ಸೋಮನಾಥನಗರಕ್ಕೆ ಒಳಚರಂಡಿ ವ್ಯವಸ್ಥೆ ಮತ್ತು ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು. ಕೇರ್ಗಳ್ಳಿ ಕೆರೆಯಿಂದ ಬರುವ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಲಿಂಗಾಬುದ್ಧಿಪಾಳ್ಯದ ಸಿದ್ದರಾಮಯ್ಯ ಬಡಾವಣೆಗೆ ಒಳಚರಂಡಿ, ಕುಡಿಯುವ ನೀರು ಒದಗಿಸುವುದರೊಂದಿಗೆ ಸಂಪೂರ್ಣ ಅಭಿವೃದ್ಧಿಪಡಿಸಲಾಗುವುದು. ಆರ್.ಟಿ. ನಗರದಲ್ಲಿ ನಿಜವಾದ ಭೂಮಾಲೀಕನಿಗೆ ತಲುಪಬೇಕಾದ ಹಣವನ್ನು ತಲುಪಿಸಲು ಕ್ರಮಕೈಗೊಳ್ಳಲಾಗುವುದು. ಜನಸ್ಪಂದನಾ ಕಾರ್ಯಕ್ರಮದಲ್ಲಿ ಎಸ್.ಬಿ.ಎಂ. ಲೇಔಟ್‌ನ ೩೬ ಮನೆಗಳಿಗೆ ತಿರುಗಾಡಲು ರಸ್ತೆ ಇಲ್ಲದೇ ತೊಂದರೆಯಾಗಿದೆ ಎಂದು ದೂರು ಬಂದಿದ್ದು, ಅಧಿಕಾರಿಗಳು ಕಾಂಪೌಂಡ್ ಹಾಕಲು ಮುಂದಾಗಿರುವ ವ್ಯಕ್ತಿಗೆ ನೋಟೀಸ್ ನೀಡಿ ಸಾರ್ವಜನಿಕರಿಗೆ ರಸ್ತೆ ನಿರ್ಮಾಣ ಮಾಡಿಕೊಡಲು ಸೂಚಿಸಲಾಯಿತು. ಶಾಸಕ ಶ್ರೀವತ್ಸರವರ ಸೂಚನೆ ಮೇರೆಗೆ ಐಶ್ವರ್ಯ ಬಡಾವಣೆಯಲ್ಲಿ ಒಳಚರಂಡಿ ನೀರು ಮುಂದೆ ಹೋಗಲು ತೊಂದರೆಯಾಗಿದ್ದು ಭೂಮಾಲೀಕರೊಂದಿಗೆ ಮಾತನಾಡಿ ಚೆನ್ನಾರೆಡ್ಡಿ ಜಮೀನಿನವರೆಗೆ ಒಳಚರಂಡಿ ಮಾಡಲು ಸೂಚಿಸಲಾಯಿತು.
ನಾಯ್ಡು ಸ್ಟೋರ್‌ನಿಂದ ಜೋಡಿ ರಸ್ತೆ ಮಾಡಲು ಕ್ರಮಕೈಗೊಳ್ಳಲಾಗುವುದು, ಜೆ.ಪಿ. ಗೊಬ್ಬಳಿಮರ ಸರ್ಕಲ್‌ನಿಂದ ದಕ್ಷಿಣಕ್ಕೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಖಾಸಗಿ ವ್ಯಕ್ತಿಗೆ ಬದಲಿ ನಿವೇಶನ ನೀಡಿ ಸಮಸ್ಯೆ ಪರಿಹರಿಸಲು ತಿಳಿಸಲಾಯಿತು ಎಂದ ಅವರು ಖಾಸಗಿ ಬಡಾವಣೆಗಳಲ್ಲಿ ವಾಸಿಸುವ ಜನರಿಗೆ ಇತ್ತ ಖಾಸಗಿ ಬಡಾವಣೆ ನಿರ್ಮಿಸಿದವರು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಸರಿಯಾಗಿ ನೀಡಿಲ್ಲ. ಪಟ್ಟಣ ಪಂಚಾಯಿತಿ ನಗರಸಭೆಯವರೂ ಸಮಸ್ಯೆ ಪರಿಹರಿಸದೇ ತೊಂದರೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದ ಅವರು ಮುಂದಿನ ದಿನಗಳಲ್ಲಿ ಮುಡಾದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಮುಡಾ ಎಸ್.ಇ. ಧರಣೇಂದ್ರ, ಕಾರ್ಯದರ್ಶಿ ಶೇಖರ್, ಇಇ ನಾಗೇಶ್, ತಹಸೀಲ್ದಾರ್ ಮೋಹನಕುಮಾರಿ, ಎಇಇ ಸಮೀನ, ಮೀನಾಕ್ಷಿ, ಸಹಾಯಕ ನಿರ್ದೇಶಕರಾದ ರೂಪ, ಪ್ರಶಾಂತ್, ಆಪ್ತ ಸಹಾಯಕ ಗಂಗಾಧರ್, ಮುಖಂಡರಾದ ಜಿ.ವಿ. ಸೀತಾರಾಂ, ಬಿ. ರವಿ, ಪ್ರಕಾಶ್, ಜವರೇಗೌಡ, ಲಕ್ಷ್ಮಯ್ಯ, ದೇವಯ್ಯ, ಬಂಗಾರಪ್ಪ, ಮಹದೇವ್, ಬಡಗಲಹುಂಡಿ ರವಿ ಹಾಜರಿದ್ದರು.