ಹನೂರು: ತಾಲೂಕಿನ ಪೊನ್ನಾಚಿ ಸುತ್ತಮುತ್ತ ಉಪಟಳ ಕೊಡುತ್ತಿದ್ದ ಪುಂಡಾನೆ ಸೆರೆ ಹಿಡಿಯಲು ಗುರುವಾರ ಅರು ಆನೆಗಳು ಬಂದಿಳಿದಿದ್ದು, ಇಂದಿನಿಂದ ಆನೆ ಸೆರೆ ಕಾರ್ಯಾಚರಣೆ ಆರಂಭವಾಗಲಿದೆ.
ಮಲೆಮಹದೇಶ್ವರ ವನ್ಯಧಾಮದ ಪೊನ್ನಾಚಿ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದಲೂ ಪುಂಡಾನೆಯೊಂದು ಕಾಡಂಚಿನ ಜನರಿಗೆ ವ್ಯಾಪಕ ತೊಂದರೆ ಕೊಡುತ್ತಿತ್ತು. ಜಮೀನಿನಲ್ಲಿರುವ ಫಸಲು ತಿಂದು ಹಾಳು ಮಾಡುವುದರ ಜತೆಗೆ ಮನೆಗಳ ಬಳಿ ಬಂದು ಗೇಟ್, ಗೋಡೆ ಹಾಗೂ ತೆಂಗಿನ ಮರ ನಾಶಗೊಳಿಸುವುದರ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿತ್ತು.
ಈ ಹಿನ್ನಲೆ ನಾಗರಹೊಳೆ ಅಭಯಾರಣ್ಯದಿಂದ ಬಲರಾಮ, ಅರ್ಜುನ, ಕರ್ಣ, ಅಶ್ವತ್ಥಾಮ ಸೇರಿದಂತೆ ಆರು ಆನೆಗಳು ಬಂದಿಳಿದಿದ್ದು, ಮೂರು ದಿನಗಳ ಕಾರ್ಯಾಚರಣೆ ನಡೆಯಲಿದೆ.
ತೊಂದರೆ ಕೊಡುತ್ತಿರುವ ಅನೆ ಸೆರೆ ಸಿಕ್ಕರೆ ದಿನಕ್ಕೆ ಕಾರ್ಯಾಚರಣೆ ಮುಗಿಯಲಿದೆ. ಸಿಗದಿದ್ದರೆ ಮತ್ತೆ ಎರಡು ದಿನ ಕಾರ್ಯಾಚರಣೆ ಮುಂದುವರೆಯಲಿದೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.