ಹನೂರು : ಹನೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ಅಂಗಡಿ ಮಳಿಗೆಗಳ ಬಾಡಿಗೆ ಹಣ ನೀಡುವಂತೆ ಬಾಡಿಗೆದಾರರಿಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹೇಶ್ ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ.
ಹನೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ಅಂಗಡಿ ಮಳಿಗೆಗಳ ಬಾಡಿಗೆ ಹಣ ಸುಮಾರು 70ಲಕ್ಷ ಬಾಕಿ ಇರುವ ಪರಿಣಾಮ ಎಚ್ಚೆತ್ತ ಮುಖ್ಯಾಧಿಕಾರಿ ಮಹೇಶ್ ನೇತ್ರತ್ವದ ತಂಡ ಖುದ್ದಾಗಿ ಅಂಗಡಿಗಳ ಬಳಿ ತೆರಳಿ ನೋಟಿಸ್ ನೀಡಿ ಬಳಿಕ ಮಾತನಾಡಿದ ಅವರು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವುದರ ಜತೆಗೆ ಪಪಂಗೆ ಆದಾಯ ಬರುವ ದೃಷ್ಟಿಯಿಂದ 36 ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿತ್ತು.
ಈ ಅಂಗಡಿ ಮಳಿಗೆಗಳನ್ನು 2016ರಲ್ಲಿ ಟೆಂಡರ್ ಮೂಲಕ ಬಾಡಿಗೆಗೆ ನೀಡಲಾಗಿತ್ತು. ಆದರೆ ಕೆಲ ಅಂಗಡಿ ಮಾಲಿಕರು ಸಕಾಲಕ್ಕೆ ಬಾಡಿಗೆ ನೀಡದೆ ಇರುವುದರಿಂದ ಪಂಚಾಯತಿಗೆ ಆದಾಯವು ಕುಂಠಿತವಾಗಿ ಅಭಿವೃದ್ಧಿ ಕೆಲಸಗಳಿಗೂ ಸಹ ಹಿನ್ನಡೆಯಾಗಿದೆ. ಈ ದಿಸೆಯಲ್ಲಿ ಬಾಡಿಗೆ ಹಣ ನೀಡುವಂತೆ ಹಲವಾರು ಭಾರಿ ನೋಟೀಸ್ ನೀಡಿದ್ದರೂ ಸಹ ಬಾಕಿ ಹಣವನ್ನುಹಲವು ಮಂದಿ ಬಾಡಿಗೆದಾರರು ಸಕಾಲಕ್ಕೆ ಪಾವತಿಸಿಲ್ಲ .
ಆದ್ದರಿಂದ ಬಾಕಿ ಇರುವ ಬಾಡಿಗೆ ಹಣವನ್ನು 3 ದಿನಗಳ ಒಳಗೆ ಪಾವತಿಸತಕ್ಕದ್ದು ತಪ್ಪಿದ್ದಲ್ಲಿ ಪುರಸಭೆ ಕಾಯ್ದೆ 1964ರ ಪ್ರಕಾರ ನಿಯಮಾನುಸಾರ ಅಂಗಡಿ ಮಳಿಗೆಗಳಿಗೆ ಬೀಗ ಮುದ್ರೆ ಹಾಕಿ ಹಾಲಿ ಮಳಿಗೆಗಳನ್ನು ಬಹಿರಂಗ ಮರುಹರಾಜು ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಈಸಂದರ್ಭದಲ್ಲಿ ಕಂದಾಯ ಅಧಿಕಾರಿ ಮಂಜು ಹಾಗೂ ಪ್ರತಾಪ್ ಹಾಜರಿದ್ದರು.
