ವಿನಯ್ ದೊಡ್ಡಕೊಪ್ಪಲು
ಹೊಸೂರು: ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರು ತುಂಬಿಸಬೇಕಾದ ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು, ಕೆಲವು ಇದರಿಂದ ಕೆರೆಗಳು ನೀರಿಲ್ಲದೆ ಒಣಗುತ್ತಿದ್ದರೇ ಇನ್ನು ಕೆಲವು ಪೂರ್ತಿ ತುಂಬದೇ ಅರ್ಧ ತುಂಬಿ ಪೂರ್ತಿ ತುಂಬಲು ಕಾಯ್ದು ಕುಳಿತಿವೆ.
ಸಾಲಿಗ್ರಾಮ ತಾಲೂಕಿನ ವ್ಯಾಪ್ತಿಗೆ ಬರುವ ಮಾಯಿಗೌಡನ ಹಳ್ಳಿ ದೇವರಕೆರೆ, ಕುಪ್ಪೆ ಕೆರೆ ಸೇರಿದಂತೆ ಇನ್ನಿತರೆ ಹತ್ತಾರು ಕೆರೆಗಳಿಗೆ ಹಾರಂಗಿ ನಾಲೆಯ ಕೃಷ್ಣರಾಜ ನಗರ ಉಪ ನಾಲೆಯಿಂದ ನೀರು ತುಂಬಿಸದ ಪರಿಣಾಮ ಕೆರೆಗಳು ನೀರಿಲ್ಲದೇ ಉಪಯೋಗಕ್ಕೆ ಬಾರದಂತೆ ಆಗಿವೆ.
ಮಾಯಿಗೌಡನಹಳ್ಳಿ ಗ್ರಾಮದ ದೇವರಕೆರೆಯನ್ನು ಲಕ್ಷಾಂತರ ರೂ ಕಟ್ಟಿ ಮೀನುಸಾಕಾಣಿಕೆ ಮಾಡಲು ಗುತ್ತಿಗೆ ಪಡೆದಿದ್ದೇನೆ ಅದರೆ ಅಧಿಕಾರಿಗಳು ಕೆರೆಗೆ ನೀರು ತುಂಬಿಸದೇ ಇರುವ ಪರಿಣಾಮ ನನಗೆ ಮೀನ ಸಾಕಾಣಿಕೆಗೆ ತೊಂದರೆ ಅಗಿದ್ದು ಲಕ್ಷಾಂತರ ರೂ ನಷ್ಟವಾಗಿದ್ದು ಗ್ರಾ.ಪಂ.ನವರು ನನಗೆ ಇನ್ನು ಒಂದು ವರ್ಷ ಹೆಚ್ಚಿಗೆ ಮೀನು ಸಾಕಾಣಿಕೆ ಮಾಡಲು ಅವಕಾಶ ಮಾಡಿ ಕೊಡಬೇಕು
– ಗೊಲ್ಲರಕೊಪ್ಪಲು ರಾಜನಾಯಕ, ಮೀನುಸಾಕಾಣಿಕೆ ಗುತ್ತಿಗೆದಾರ
ನಾಲೆಗಳಿಗೆ ನೀರು ಬಿಟ್ಟಾಗ ಮೊದಲು ಕೆರೆ ಕಟ್ಟೆಗಳಿಗೆ ನೀರು ತುಂಬಿಸುವಂತೆ ಸರ್ಕಾರ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಅದನ್ನು ಪಾಲಿಸಬೇಕಾದ ಅಧಿಕಾರಿ ವರ್ಗ ಇಲ್ಲಿ ಕಣ್ಣು ಮುಚ್ಚಿಕುಳಿತಿದ್ದಾರೆ.
ಕೆರೆಗಳಲ್ಲಿ ನೀರು ತುಂಬದ ಪರಿಣಾಮ ಕೆರೆಯ ಅಕ್ಕ ಪಕ್ಕ ಇರುವ ಬೋರ್ ವೇಲ್ ನಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದ್ದು ಅಲ್ಲದೇ ಕೆರೆಯ ಸಮೀಪದ ಜಮೀನುಗಳಿಗೆ ಬೆಳೆ ಬೆಳೆಯಲು ನೀರಿನ ಸೌಲಭ್ಯ ಇಲ್ಲದಂತೆ ಆಗಿದೆ.
ಇದರ ಜತಗೆ ಲಕ್ಷಾಂತರ ರೂಪಾಯಿಗಳನ್ನು ಕಟ್ಟಿ ಈ ಕೆರೆಗಳಲ್ಲಿ ಮೀನು ಸಾಕಾಣೆ ಮಾಡಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕೆರೆಯಲ್ಲಿ ನೀರು ಇಲ್ಲದೇ ಮೀನು ಮರಿಗಳನ್ನು ಬಿಡಿಸಲು ಸಾಧ್ಯವಾಗದೇ ಕೈ ಕಟ್ಟಿ ಕೂರುವಂತೆ ಆಗಿದೆ.
ಈಗಲಾದರು ಹೊಸೂರು ಹಾರಂಗಿ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಕೆರೆಕಟ್ಟೆಗಳಿಗೆ ನೀರು ತುಂಬಿಸಿ ಕೆರೆಯ ಸುತ್ತ-ಮುತ್ತಾ ಅಂತರ್ ಜಲ ಹೆಚ್ಚಿಸಿ ಮೀನುಸಾಕಾಣಿಗೆ ಅನುಕೂಲ ಕಲ್ಪಿಸಿ ಕೊಡುವರೇ..? ಎಂಬುದನ್ನು ಕಾದು ನೋಡಬೇಕಿದೆ