Monday, April 7, 2025
Google search engine

Homeಸ್ಥಳೀಯಉದ್ಯೋಗಕ್ಕಾಗಿ ಹೆಚ್ಚಿನ ಶ್ರಮ ಅತ್ಯಗತ್ಯ : ಶಾಸಕ ಎಆರ್ ಕೃಷ್ಣಮೂರ್ತಿ

ಉದ್ಯೋಗಕ್ಕಾಗಿ ಹೆಚ್ಚಿನ ಶ್ರಮ ಅತ್ಯಗತ್ಯ : ಶಾಸಕ ಎಆರ್ ಕೃಷ್ಣಮೂರ್ತಿ

ಯಳಂದೂರು : ಇಂದಿನ ಜಗತ್ತು ಸ್ಪರ್ಧಾತ್ಮಕ ಯುಗವಾಗಿದೆ. ನಿರುದ್ಯೋಗಿ ಯುವಜನತೆ ತಮ್ಮ ಮನೆಯ ಸುತ್ತಮುತ್ತಲೇ ಉದ್ಯೋಗಬೇಕು ಎನ್ನುವ ಹಠ ಬಿಡಬೇಕು. ಉದ್ಯೋಗ ಅರಸಿಕೊಂಡು ಬೇರೆಡೆ ಹೋಗಬೇಕು. ಇದಕ್ಕಾಗಿ ಹೆಚ್ಚಿನ ಶ್ರಮ ಅಗತ್ಯ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು.
ಅವರು ಸಮೀಪದ ಸಂತೆಮರಹಳ್ಳಿಯಲ್ಲಿ ಡಿಎಂ ಚಾರಿಟಬಲ್ ಟ್ರಸ್ಟ್ ವತಿಯಿಂದ ಈಚೆಗೆ ನಡೆದ ಕೌಶಲ್ಯ ತರಬೇತಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಇಂದಿನ ಯುವ ಜನತೆ ತಮ್ಮಲ್ಲಿ ವಿವಿಧ ಉದ್ಯೋಗಾಧಾರಿತ ಕೌಶಲ್ಯವನ್ನು ಹೆಚ್ಚಿಸಿಕೊಂಡರೆ ಅವರಿರುವಲ್ಲಿಯೇ ಉದ್ಯೋಗ ದೊರಕುತ್ತದೆ. ಆದ್ದರಿಂದ ಇಂದಿನ ಯುವಕರು ಯುವತಿಯರು ಶಿಕ್ಷಣದ ಜೊತೆ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಗ್ರಾಮೀಣ ಯುವಜನತೆ ನಗರ ಪಟ್ಟಣಗಳಲ್ಲಿ ಉದ್ಯೋಗ ಸಿಕ್ಕರೂ ಹೋಗುತ್ತಿಲ್ಲ. ಏಕೆಂದರೆ ಅವರು ತಮ್ಮ ಮನೆಯ ಸುತ್ತಮುತ್ತಲೇ ಉದ್ಯೋಗ ಬಯಸುತ್ತಿದ್ದಾರೆ. ತಮಗೆ ಮಾಹಿತಿ ಇರುವಂತೆ ಬೆಂಗಳೂರಿನಲ್ಲಿ ೨೦೦೦ಕ್ಕೂ ಹೆಚ್ಚು ಉದ್ಯೋಗ ಖಾಸಗಿ ಕಂಪನಿಗಳಲ್ಲಿ ಲಭ್ಯವಿದೆ. ಆದರೂ ನಮ್ಮ ಯುವ ಜನತೆ ಅಲ್ಲಿ ಉದ್ಯೋಗ ಪಡೆಯಲು ಮುಂದಾಗುತ್ತಿಲ್ಲ. ಇಂತಹ ಮನಸ್ಥಿತಿಯಿಂದ ಯುವ ಜನತೆ ಹೊರಬರಬೇಕು ಎಂದು ಶಾಸಕರು ಕರೆ ನೀಡಿದರು.
ಹಿಂದಿನ ಸರ್ಕಾರ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ ಉದ್ಯೋಗ ಎನ್ನುವುದು ಈಗ ಕನಸಿನ ಮಾತಾಗಿದೆ. ಆದರೆ ಈಗ ನಮ್ಮ ಸರಕಾರ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವವರೆಗೂ ನೆರವು ನೀಡುವ ಯುವಶಕ್ತಿ ಎನ್ನುವ ಗ್ಯಾರಂಟಿ ಯೋಜನೆಯನ್ನು ಸದ್ಯದಲ್ಲೇ ಜಾರಿಗೊಳಿಸಲಿದೆ, ಇದನ್ನು ಬಳಸಿಕೊಳ್ಳಿ. ಸಂತೆಮರಹಳ್ಳಿ ಸುತ್ತಮುತ್ತ ನಿರುದ್ಯೋಗಿಗಳಿಗೆ ಈ ಟ್ರಸ್ಟ್ ಕೌಶಲ್ಯ ಅಭಿವೃದ್ಧಿಗಳನ್ನು ನೀಡಿದೆ. ಕೆಲವರಿಗೆ ಉದ್ಯೋಗವನ್ನು ದೊರಕಿಸಿರುವುದು ಅತ್ಯುತ್ತಮ ಕಾರ್ಯ ಎಂದು ಶಾಸಕರು.
ಜಿಲ್ಲಾಧಿಕಾರಿ ಡಿಎಸ್ ರಮೇಶ್ ಮಾತನಾಡಿ ಇಂದಿನ ಯುವ ಜನತೆಗೆ ಕೌಶಲ್ಯದ ಜೊತೆಗೆ ನಂಬಿಕಾರ್ಹತೆ ಬಹಳ ಮುಖ್ಯ. ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಎಷ್ಟೇ ವಿದ್ಯಾವಂತರಾಗಿದ್ದರೂ ಕೌಶಲ್ಯ ಇಲ್ಲದಿದ್ದರೆ ಅದಕ್ಕೆ ನಿರೀಕ್ಷಿತ ಲಾಭ ಸಿಗುವುದಿಲ್ಲ. ಆದ್ದರಿಂದ ಕೌಶಲ್ಯ ಎನ್ನುವುದು ಇಂದಿನ ಅತ್ಯಗತ್ಯ. ಭಾರತದ ಯುವ ಜನತೆಗೆ ಅದರಲ್ಲೂ ಕೌಶಲ್ಯ ಭರಿತ ಯುವಕರಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳಲು ಯುವಕರು ಸಜ್ಜಾಗಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಇದಕ್ಕೂ ಮುನ್ನ ಡಿಎಂ ಚಾರಿಟೇಬಲ್ ಟ್ರಸ್ಟ್ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ವಿವಿಧ ತರಬೇತಿ ಪಡೆದಿದ್ದ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಇದೇ ವೇಳೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡ ೯೮ ರಷ್ಟು ಅಂಕ ಪಡೆದ ೧೫ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್‌ಬಿಐನ ಶಾಖಾವ್ಯವಸ್ಥಾಪಕ ಚನ್ನಕೇಶವ, ಡಿಎಂ ಟ್ರಸ್ಟ್ನ ಸಲಹೆಗಾರ ಜೈ ಶಂಕರ್, ಪ್ರಾಂಶುಪಾಲರುಗಳಾದ ಶಿವಣ್ಣ, ತಮ್ಮಯ್ಯ, ಜಯಶೀಲ, ಸಬ್‌ಇನ್ಸ್ಪೆಕ್ಟರ್ ಹನುಮಂತಪ್ಪ ಉಪ್ಪಾರ್, ತಾಜುದ್ದೀನ್ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular