ಜೈಪುರ : ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರಿಗೆ ವಿಶೇಷ ಗೌರವ ಸೂಚಿಸುವ ಸಲುವಾಗಿ, ಜೈಪುರ ಮೇಣದ ವಸ್ತು ಸಂಗ್ರಹಾಲಯವು ಕೌರ್ ಅವರ ಮೇಣದ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿದ್ದು, ಪ್ರತಿಮೆಯನ್ನು ರಚಿಸುವ ಸಲುವಾಗಿ ನಮ್ಮ ತಂಡವು ಕೌರ್ ಅವರನ್ನು ಭೇಟಿಯಾಗಿ ದೇಹದ ಅಳತೆ ಸೇರಿದಂತೆ ಫೋಟೊ ಮತ್ತು ವಿಡಿಯೊವನ್ನು ಚಿತ್ರೀಕರಿಸಿದೆ ಎಂದು ವಸ್ತು ಸಂಗ್ರಹಾಲಯದ ಸಂಸ್ಥಾಪಕ ಅನೂಪ್ ಶ್ರೀವಾಸ್ತವ ತಿಳಿಸಿದ್ದಾರೆ.
ಈ ವೇಳೆ ಮಹಾತ್ಮ ಗಾಂಧೀಜಿ, ಮಹಾರಾಣ ಪ್ರತಾಪ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಮದರ್ ತೆರೇಸಾ, ಅಮಿತಾಭ್ ಬಚ್ಚನ್, ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ, ಸೈನಾ ನೆಹ್ವಾಲ್ ಹಾಗೂ ಸಂದೀಪ್ ಸಿಂಗ್ ಮುಂತಾದವರ ಪ್ರತಿಮೆಯನ್ನು ಈಗಾಗಲೇ ಇಲ್ಲಿ ಸ್ಥಾಪಿಸಲಾಗಿದ್ದು, ಇದೀಗ ಹರ್ಮನ್ಪ್ರೀತ್ ಕೌರ್ ಕೂಡ ಈ ಪ್ರತಿಷ್ಠಿತರ ಸಾಲಿಗೆ ಸೇರಲಿದ್ದಾರೆ ಎಂದಿದ್ದಾರೆ.
ಕಳೆದ ತಿಂಗಳು ನ.2ರಂದು ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದ ವಿಶ್ವಪ್ ಫೈನಲ್ ಹಣಾಹಣಿಯಲ್ಲಿ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವೂ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್ ಭರ್ಜರಿ ಗೆಲುವು ಸಾಧಿಸಿ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್ ನಷ್ಟದಲ್ಲಿ 298 ರನ್ ಕಲೆಹಾಕಿತು. ನಾಯಕಿ ಲಾರಾ ವೊಲ್ವಾರ್ಟ್ ಅಮೋಘ ಆಟದ ಹೊರತಾಗಿಯೂ ದ.ಆಫ್ರಿಕಾ 45.3 ಓವರ್ಗಳಲ್ಲಿ 246 ರನ್ಗೆ ಆಲೌಟಾಗಿ ಸೋಲೊಪ್ಪಿಕೊಂಡಿತ್ತು.
ಐತಿಹಾಸಿಕ ಟ್ರೋಫಿ ಗೆಲುವಿನ ಬಳಿಕ ಭಾರತದ ನಾಯಕಿ ಹರ್ಮನ್ಪ್ರೀತ್ ಮೈದಾನದಲ್ಲೇ ಕೋಚ್ ಅಮೋಲ್ ಮಜುಂದಾರ್ ಅವರ ಕಾಲಿಗೆ ಬಿದ್ದು ಗುರು ಭಕ್ತ ತೋರಿಸಿದರು. ಭಾರತಕ್ಕೆ ಕಪ್ ತಂದುಕೊಟ್ಟ ನಾಯಕಿ ಹರ್ಮನ್ಪ್ರೀತ್ ಕೌರ್ ಅವರನ್ನು ಈಗ ಕ್ರಿಕೆಟ್ ಜಗತ್ತು ಕಪಿಲ್ ದೇವ್, ಎಂ.ಎಸ್.ಧೋನಿಯ ಸಾಲಿನಲ್ಲಿಟ್ಟು ನೋಡುತ್ತಿದೆ ಎನ್ನಲಾಗಿದೆ.
ಈ ಯಶಸ್ಸಿನ ಮೆಟ್ಟಿಲು ಏರುವ ಮೊದಲು ಕೌರ್ 12 ಬಾರಿ ಮುಗ್ಗರಿಸಿ ಬಿದ್ದಿದ್ದರು. ಏಕದಿನ ವಿಶ್ವಕಪ್ನಲ್ಲಿ 4, ಟಿ20 ವಿಶ್ವಕಪ್ನಲ್ಲಿ 8 ಬಾರಿ ಭಾರತವನ್ನು ಪ್ರತಿನಿಧಿಸಿದ್ದರೂ ಹರ್ಮನ್ಗೆ ಟ್ರೋಫಿ ಸಿಕ್ಕಿರಲಿಲ್ಲ. 13ನೇ ಪ್ರಯತ್ನದಲ್ಲಿ, ತಮ್ಮ 36ನೇ ವರ್ಷದಲ್ಲಿ ಕಪ್ ಗೆದ್ದು ಇತಿಹಾಸ ನಿರ್ಮಿಸಿದರು. ಒಟ್ಟಾರೆ ಹರ್ಮನ್ ಭಾರತದ ಪರ 161 ಏಕದಿನ, 182 ಟಿ20, 6 ಟೆಸ್ಟ್ ಆಡಿದ್ದಾರೆ.



