ಬೆಂಗಳೂರು: ೬೯ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕನ್ನಡದ ಬಗ್ಗೆ ಅವಹೇಳನ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಕನ್ನಡಿಗರನ್ನು ಅವಹೇಳನ ಮಾಡುವ ಪ್ರವೃತ್ತಿ ಹೆಚ್ಚಳವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರನ್ನು ಅವಹೇಳನ ಮಾಡಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಇವತ್ತು ಕನ್ನಡಿಗರಾಗಿ ಉಳಿಯುತ್ತೇವೆ ಎಂದು ಶಪತ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಕನ್ನಡಕ್ಕೆ ಅವಹೇಳನ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತೆರಿಗೆ ಹಂಚಿಕೆಯಲ್ಲಿ ಇಂದು ಕರ್ನಾಟಕಕ್ಕೆ ಅನ್ಯಾಯವಾಗಿದೆ. ಮಹಾರಾಷ್ಟ್ರದ ನಂತರ ನಾವು ಎರಡನೇ ಸ್ಥಾನದಲ್ಲಿದೆ, ನಾವು ೪,೦೦,೦೦೦ ಕೋಟಿ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ನೀಡುತ್ತಿದ್ದೇವೆ ಆದರೆ ನಮಗೆ ಪ್ರತಿಫಲ ಕಡಿಮೆಯಾಗಿದೆ. ಸಂಸದರು ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕು. ಕೇಂದ್ರವನ್ನು ನಾವು ನ್ಯಾಯ ಕೇಳಿದೆವು ಆದರೆ ನಮ್ಮ ಹಕ್ಕು ನಮಗೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.