ಕೋಲಾರ: ‘ಜಾತಿ ಜನಗಣತಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ಸರಿಯಾದ ನಿರ್ಧಾರ ಕೈಕೊಳ್ಳಬೇಕು. ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸಬೇಕು’ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಒತ್ತಾಯಿಸಿದರು
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಘೋರ ಅಪರಾಧ ಮಾಡಿದೆ. ಇದು ಮೂರ್ಖತನದ ಪರಮಾವಧಿ ಆಗಿದ್ದು, ಕಾನೂನು ಸಂಘರ್ಷಕ್ಕೆ ಮುಂದಾಗಿದೆ. ನಾನೂ 30 ವರ್ಷಗಳಿಂದ ರಾಜಕಾರಣದಲ್ಲಿದ್ದು, ಯಾವುದೇ ಸರ್ಕಾರ ಹಿಂದೆಂದೂ ಇಂಥ ತೀರ್ಮಾನ ತೆಗೆದುಕೊಂಡಿರಲಿಲ್ಲ’ ಎಂದರು.
‘ಕಾನೂನು ಹಾಗೂ ಸಿಬಿಐ ಮೇಲೆ ವಿಶ್ವಾಸ ಇದ್ದಿದ್ದರೆ, ಯಾವುದೇ ತಪ್ಪು ಮಾಡಿಲ್ಲವೆಂದರೆ ತನಿಖೆಗೆ ಶಿವಕುಮಾರ್ ಏಕೆ ಹೆದರಬೇಕಿತ್ತು? ಅದನ್ನು ಬಿಟ್ಟು ಅವರು ಸರ್ಕಾರವನ್ನೇ ತನ್ನ ಕೈಗೊಂಬೆ ಮಾಡಿಕೊಂಡಿದ್ದಾರೆ. ಸರ್ಕಾರವೇ ಅವರಿಗೆ ತಲೆಬಾಗಿದೆಯೇನೋ ಎಂಬ ಪ್ರಶ್ನೆ ಮೂಡಿದೆ’ ಎಂದು ಹೇಳಿದರು.
‘ಇಂಥ ನಿರ್ಧಾರಕ್ಕೆ ಮುನ್ನ ತಜ್ಞರ ಅಭಿಪ್ರಾಯ ಪಡೆಯಬೇಕಿತ್ತು. ಅಭಿವೃದ್ಧಿ ಕೆಲಸ ಬಿಟ್ಟು ಸ್ವಾರ್ಥಕ್ಕಾಗಿ ಅಧಿಕಾರ ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ, ಜೆಡಿಎಸ್ ಮುಖಂಡರ ಮೇಲೂ ಇಂಥ ಪ್ರಕರಣಗಳಿವೆ. ಆಗ ಯಾರೂ ವಾಪಸ್ ಪಡೆದಿರಲಿಲ್ಲ. ಕಾಂಗ್ರೆಸ್ ಸರ್ಕಾರ ಮಾಡಿರುವ ತಪ್ಪುಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ಜನರೇ ತಕ್ಕ ಉತ್ತರ ನೀಡುತ್ತಾರೆ’ ಎಂದರು.
‘ಸೋಮಣ್ಣ ಹಾಗೂ ಯತ್ನಾಳ ಬಿಜೆಪಿ ಹಿರಿಯ ನಾಯಕರು. ಕಿರಿಯರಾದ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಅವರಿಗೆ ಅಸಮಾಧಾನವಿದೆ. ಆದರೆ, ಸೋಮಣ್ಣ, ಯತ್ನಾಳ ಹಾಗೂ ಯಡಿಯೂರಪ್ಪ ಮಾರ್ಗದರ್ಶನದಲ್ಲೇ ವಿಜಯೇಂದ್ರ ಕೆಲಸ ಮಾಡುತ್ತಾರೆ. ಸೋಮಣ್ಣ ಕಾಂಗ್ರೆಸ್‌ಗೆ ಹೋಗಲ್ಲ. ಈಗಾಗಲೇ ಅವರು ಎಲ್ಲಾ ಪಕ್ಷ ನೋಡಿಕೊಂಡು ಬಂದಿದ್ದಾರೆ. ಅವರು ಬಿಜೆಪಿಯಲ್ಲೇ ಇರುತ್ತಾರೆ’ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವೆ ನಡೆಯುತ್ತಿದೆ ಎನ್ನಲಾದ ಒಳಜಗಳದ ಕುರಿತು ಪ್ರತಿಕ್ರಿಯಿಸಿ, ‘ಅವರದ್ದು ಗಂಡ ಹೆಂಡತಿ ಜಗಳವಿದ್ದಂತೆ. ಬೆಳಿಗ್ಗೆ ಜಗಳವಾಡುತ್ತಾರೆ, ರಾತ್ರಿ ಸರಿ ಹೋಗುತ್ತಾರೆ. ಅದೇನೇ ಮಾಡಿಕೊಳ್ಳಲಿ ಜನರಿಗೆ ನೀಡಿದ ಆಶ್ವಾಸನೆ ಈಡೇರಿಸಬೇಕು. ಇಲ್ಲದಿದ್ದರೆ ಜನರೇ ತಿರಸ್ಕರಿಸುತ್ತಾರೆ’ ಎಂದರು.
ಶಾಸಕ ಜನಾರ್ದನ ರೆಡ್ಡಿ ಅವರನ್ನು ವಾಪಸ್ ಬಿಜೆಪಿಗೆ ಕರೆತರುವ ಪ್ರಯತ್ನದ ಬಗ್ಗೆ, ‘ಚರ್ಚೆ ನಡೆಯುತ್ತಿರುವುದು ನಿಜ. ಅವರು ಬಿಜೆಪಿಗೆ ಬರಲು ನನ್ನ ಅಭ್ಯಂತರಲ್ಲ ಇಲ್ಲ’ ಎಂದು ಹೇಳಿದರು.‘ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಸದ್ಯ ನಾನು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಂದೆ ನೋಡೋಣ’ ಎಂದರು.