Friday, April 18, 2025
Google search engine

Homeರಾಜ್ಯಹಾಸನಾಂಬ ದೇಗುಲ: 9 ದಿನ ದರ್ಶನಕ್ಕೆ ಅವಕಾಶ, ಆನ್​​ಲೈನ್​ ಬುಕ್ಕಿಂಗ್​ ಲಭ್ಯ

ಹಾಸನಾಂಬ ದೇಗುಲ: 9 ದಿನ ದರ್ಶನಕ್ಕೆ ಅವಕಾಶ, ಆನ್​​ಲೈನ್​ ಬುಕ್ಕಿಂಗ್​ ಲಭ್ಯ

ಹಾಸನ: ಹಾಸನಾಂಬ ದೇಗುಲದ ಬಾಗಿಲನ್ನು ಗುರುವಾರ (ಅಕ್ಟೋಬರ್ 24) ರಂದು ತೆರೆಯಲಾಗುತ್ತದೆ. ನವೆಂಬರ್ 3ರವರೆಗು ಮಾತ್ರ ದೇಗುಲದ ಬಾಗಿಲು ತೆರೆದಿರುತ್ತದೆ. ವರ್ಷದಿಂದ ವರ್ಷಕ್ಕೆ ಹಲವು ಆಕರ್ಷಣೆಗಳೊಂದಿಗೆ ಗಮನ ಸೆಳೆಯುತ್ತಿರುವ ಹಾಸನಾಂಬೆ ಉತ್ಸವದಲ್ಲಿ ಈ ವರ್ಷ ದಸರಾ ಮಾದರಿಯ ದೀಪಾಲಂಕಾರ, ಇದೇ ಮೊದಲಬಾರಿಗೆ ಫಲಪುಷ್ಪ ಪ್ರದರ್ಶನ, ಹಾಟ್ ಏರ್ ಬಲೂನ್, ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಅಕ್ಟೋಬರ್ 24ರ ಗುರುವಾರ ಮದ್ಯಾಹ್ನ 12 ಗಂಟೆಗೆ ದೇಗುಲದ ಗರ್ಭಗುಡಿ ಬಾಗಿಲು ತೆರೆಯುತ್ತದೆ. ಕಳೆದ ಬಾರಿ 14 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದರು. ಈ ವರ್ಷ ಸುಮಾರು 20 ರಿಂದ 25 ಲಕ್ಷ ಭಕ್ತರು ಬರುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಇದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ದೇಗುಲವನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿದ್ದು ದೇಗುಲದ ಆವರಣದಲ್ಲಿ ಭಕ್ತರ ದರ್ಶನಕ್ಕಾಗಿ ಸರತಿ ಸಾಲುಗಳ ಬ್ಯಾರಿಕೇಡ್, ಸಾಂಪ್ರದಾಯಿಕ ಮಾದರಿಯ ಮಾಡೆಲ್​ಗಳು, ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ಜ್ಮನ್ ಟೆಂಟ್ ಮತ್ತು ದೊನ್ನೆ ಪ್ರಸಾದ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ.

ವರ್ಷದಿಂದ ವರ್ಷಕ್ಕೆ ಹಲವು ವಿಶೇಷತೆಗಳನ್ನು ಒಳಗೊಂಡು ನಡೆಯುತ್ತಿರುವ ಹಾಸನಾಂಬೆ ದೇವಿ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾಮಹೋತ್ಸವದಲ್ಲಿ ಈ ಬಾರಿ ನಗರದಲ್ಲಿ ಮೈಸೂರು ದಸರಾ ಮಾದರಿಯ ಚಿತ್ತಾಕರ್ಷಕ ಲೈಟಿಂಗ್ ಮಾಡಲಾಗಿದೆ. ಲೈಟಿಂಗ್ ವೀಕ್ಷಣೆಗೆ ಡಬಲ್ ಡೆಕ್ಕರ್ ಬಸ್ ಇರಲಿದೆ.

ಬರುವ ಭಕ್ತರ ಗಮನ ಸೆಳೆಯಲು ಹಾಟ್ ಏರ್ ಬಲೂನ್ ಸಂಚಾರ, ಪ್ಯಾರಾ ಗ್ಲೈಡಿಂಗ್, ರಾಜ್ಯಮಟ್ಟದ ಸಮೂಹ ನೃತ್ಯ ಸ್ಪರ್ಧೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಳೆದ ವರ್ಷ ಆದ ಕೆಲ ಲೋಪಗಳನ್ನು ಸರಿಪಡಿಸಿಕೊಂಡು, ಈ ವರ್ಷ ಅದ್ಧೂರಿ ಹಬ್ಬ ಆಚರಣೆಗೆ ತಯಾರಿ ಮಾಡಿಕೊಂಡಿದ್ದೇವೆ. ಹಾಸನಾಂಬ ಆ್ಯಪ್​, ದರ್ಶನಕ್ಕೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಸೇರಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ನಾಡಿನ ಮೂಲೆ ಮೂಲೆಯಿಂದ ಬರುವ ಭಕ್ತರಿಗಾಗಿ ಸಕಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾದಿಕಾರಿ ಸಿ. ಸತ್ಯಭಾಮ ಹೇಳಿದರು.

ಹಾಸನದಲ್ಲಿ ಹುತ್ತದ ರೂಪದಲ್ಲಿ ನೆಲೆಸಿರುವ ಶಕ್ತಿದೇವತೆ ಹಾಸನಾಂಬೆ ದೇಗುಲದಲ್ಲಿ ದೇವಿ ದರ್ಶನ ಸಿಗುವುದು ವರ್ಷಕ್ಕೆ ಒಮ್ಮೆ ಮಾತ್ರ. ಪ್ರತೀ ವರ್ಷ ಅಶ್ವಯುಜ ಮಾಸದ ಅಷ್ಟಮಿಯ ಗುರುವಾರ ದೇಗುಲದ ಬಾಗಿಲು ತೆರೆಯಲಾಗುತ್ತೆ. ಈ ವರ್ಷ ಅಕ್ಟೋಬರ್ 24ರ ಮದ್ಯಾಹ್ನ ದೇಗುಲದ ಬಾಗಿಲು ತೆರೆದರೆ ನವೆಂಬರ್ 3ಕ್ಕೆ ಮದ್ಯಾಹ್ನ 12ಕ್ಕೆ ಗರ್ಭಗುಡಿ ಬಾಗಿಲನ್ನು ಮುಚ್ಚಲಾಗುತ್ತೆ.

ಒಟ್ಟು 11 ದಿನ ದೇಗುಲದ ಬಾಗಿಲು ತೆರೆದಿರಲಿದೆ. ಆದರೆ 9 ದಿನಗಳು ಮಾತ್ರ ಭಕ್ತರ ದರ್ಶನಕ್ಕೆ ಅವಕಾಶ ಸಿಗಲಿದೆ. ದಿನದ 24 ಗಂಟೆಗಳೂ ಕೂಡ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಭಕ್ತರಿಗೆ ದರ್ಶನಕ್ಕೆ ಬೇಕಾದ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ನೇರ ದರ್ಶನ ಪಡೆಯ ಬಯಸುವ ಭಕ್ತರಿಗೆ 1000 ರೂ. ಟಿಕೆಟ್ 300 ರೂ. ಟಿಕೆಟ್ ಹಾಗೂ ವಿಶೇಷ ಗಣ್ಯರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹಾಗೂ ಸಾಮಾನ್ಯ ಭಕ್ತರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಈ ವರ್ಷ ಮೊದಲದಿನ ಬಾಗಿಲು ತೆರೆದ ನಂತರ ದೇಗುಲ ಶುದ್ದಿ ಮಾಡಲಾಗುತ್ತೆ. ಮರುದಿನ ಬೆಳಿಗ್ಗೆಯಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುತ್ತೆ. ದೇವಿಗೆ ಒಟ್ಟು ನಾಲ್ಕು ಬಾರಿ ಬೇರೆ ಬೇರೆ ರೀತಿಯ ವಿಶಿಷ್ಟ ಅಲಂಕಾರ, ವಸ್ತ್ರಧಾರಣೆ ಮಾಡಲಾಗುತ್ತದೆ. ಈ ನಡುವೆ ನೈವೇದ್ಯದ ಸಂದರ್ಭ ಹೊರತು ಪಡಿಸಿ ದಿನದ 24 ಗಂಟೆಯೂ ದರ್ಶನಕ್ಕೆ ಅವಕಾಶವಿರುತ್ತದೆ.

RELATED ARTICLES
- Advertisment -
Google search engine

Most Popular