ಹಾವೇರಿ: ನಗರದಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆವರೆಗೂ ಜೋರು ಮಳೆ ಆಗಿದ್ದು, ದೊಡ್ಡ ಕಾಲುವೆಯಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ 10 ವರ್ಷದ ಬಾಲಕ ಕೊಚ್ಚಿಕೊಂಡು ಹೋಗಿದ್ದಾನೆ.
ಹಳೇ ಪಿ.ಬಿ.ರಸ್ತೆಗೆ ಹೊಂದಿಕೊಂಡಿರುವ ಶಿವಾಜಿನಗರದ 3ನೇ ಕ್ರಾಸ್‌ನಲ್ಲಿರುವ ಕಾಲುವೆಯಲ್ಲಿ ಬಾಲಕ ವೇದಾಂತ ಕೊಚ್ಚಿಕೊಂಡು ಹೋಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಹಾಗೂ ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸ್ಥಳೀಯ ನಿವಾಸಿ ವೇದಾಂತ ಮನೆ ಎದುರು ಓಡಾಡುತ್ತಿದ್ದ. ಇದೇ ಸಂದರ್ಭದಲ್ಲಿ ಜೋರು ಮಳೆ ಇತ್ತು. ಕಾಲುವೆಯಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ಕಾಲುವೆಗೆ ಆಯತಪ್ಪಿ ಬಿದ್ದು ವೇದಾಂತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದರು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಹೆಚ್ಚುವರಿ ಎಸ್ಪಿ ಶಿರಕೋಳ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳದಲ್ಲಿ ವೇದಾಂತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮ ಮಗನನ್ನು ಹುಡುಕಿಕೊಡುವಂತೆ ಪೋಷಕರು ಗೋಗರೆಯುತ್ತಿದ್ದಾರೆ.