ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ: ರೈತರು ಖರೀದಿಸಿದ್ದ ರಸಗೊಬ್ಬರಕ್ಕೆ ಹೆಚ್ಚವರಿ ಹಣ ವಸೂಲಿ ಮಾಡಿರುವ ತಾಲೂಕಿನ ಹಂಪಾಪುರ ಗ್ರಾಮದ ಶ್ರೀರಾಜೇಶ್ವರಿ ಆಗ್ರೋ ಟ್ರೇಡರ್ಸ್ ನ ಅಂಗಡಿ ಮುಂದೆ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘಟನೆ ರೈತರು ಅಂಗಡಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ಸಮೀಪದ ಬಾಚೇಗೌಡನಹಳ್ಳಿಯ ರೈತ ಚಿಕ್ಕಣ್ಣನಾಯಕ ತನ್ನ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆಗೆ ದಿ.21ರಂದು ರಸಗೊಬ್ಬರ ಖರೀದಿಸಿದ್ದಾರೆ. ಅಂಗಡಿಯಲ್ಲಿ ನಿಗಧಿತ ಬೆಲೆಗಿಂತ ಹೆಚ್ಚುವರಿ ಹಣ ಪಡೆದಿದ್ದಾರೆ ಹಾಗೂ ನಕಲಿ ಬಿಲ್ ನೀಡಿ ವಂಚಿಸಿದ್ದಾರೆ. ಈ ಕುರಿತು ರೈತರು ರಾಜ್ಯ ರೈತ ಕಲ್ಯಾಣ ಸಂಘಟನೆಯವರ ಗಮನಕ್ಕೆ ತಂದಿದ್ದಾರೆ.
ರೈತ ಕಲ್ಯಾಣ ಸಂಘದ ರಾಜ್ಯ ಉಪಾಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಈ ಘಟನೆ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ತಾಲೂಕಿನಾದ್ಯಂತ ಇರುವ ಬಿತ್ತನೆ ಬೀಜ ಮಾರಾಟಗರರ ಸಭೆ ಕರೆದು ರೈತರಿಗೆ ಅನ್ಯಾಯವಾಗದಂತೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ಮತ್ತೆ ಈ ರೀತಿಯ ಘಟನೆಗಳು ಮರುಕಳಿಸಿದರೆ ತಾಲೂಕಿನ ಕೃಷಿ ಇಲಾಖೆ ಮುಂಭಾಗ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಹೈರಿಗೆ ಉಮೇಶ್ ಮಾತನಾಡಿ ಘಟನೆ ಕುರಿತು ಅಂಗಡಿಯವರನ್ನು ವಿಚಾರಿಸಿದರೆ ಅಸಡ್ಡೆ ಉತ್ತರ ನೀಡುತ್ತಾರೆ. ಸರ್ಕಾರ ನಿಗಧಿಪಡಿಸಿರುವ ಬೆಲೆಗಿಂತ ಹೆಚ್ಚಿನ ಹಣ ವಸೂಲಿ ಮಾಡಿದ್ದಾರೆ. ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೇ ನಕಲಿ ಬಿಲ್ ಸೃಷ್ಟಿಸಿ ಸರ್ಕಾರಕ್ಕೂ ವಂಚಿಸಿದ್ದಾರೆ. ಈ ರೀತಿಯ ಘಟನೆ ಮತ್ತೆ ಮರುಕಳಿಸಬಾರದು ಎಂದು ಎಚ್ಚರಿಸಿದರು.
ಸ್ಥಳಕ್ಕಾಗಮಿಸಿ ಮಾತನಾಡಿದ ತಾಲೂಕು ಕೃಷಿ ಅಧಿಕಾರಿ ಜಯರಾಮ್, ರಸಗೊಬ್ಬರ ನೀಡಿ ನಕಲಿ ಬಿಲ್ ನೀಡಿ, ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ. ಕಾರಣ ಕೇಳಿ ನೋಟೀಸ್ ನೀಡಲಾಗುವುದು. ಸರಗೂರು ಹಾಗೂ ಕೋಟೆ ತಾಲೂಕಿನ 40 ಅಂಗಡಿಗಳ ಬಿತ್ತನೆ ಬೀಜ ಮಾರಾಟಗಾರರಿಗೆ ಘಟನೆ ಮತ್ತೆ ಮರುಳಿಸಿದರೆ ಅಂಗಡಿಯ ಪರವಾನಗಿ ರದ್ದು ಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಮೂರ್ತಿ ಕೋಟೆ, ಯುವ ಘಟಕದ ಅಧ್ಯಕ್ಷ ರುದ್ರ, ರಾಜ್ಯ ಪತ್ರಿಕೆ ಮಾಧ್ಯಮ ಹರೀಶ್, ಜಿಲ್ಲಾ ಗೌರವಾಧ್ಯಕ್ಷ ಮಾದೇಗೌಡ, ಜಿಲ್ಲಾ ಅಧ್ಯಕ್ಷ ಅನಿಲ್, ಎಚ್ ಡಿ ಕೋಟೆ ಗೌರವಾಧ್ಯಕ್ಷ ಮಂಚಯ್ಯ, ತಾಲೂಕು ಉಪಾಧ್ಯಕ್ಷರು ಜಗದೀಶ್, ರವಿಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ದಾಸೇಗೌಡರು, ತಾಲೂಕು ಕಾರ್ಯಾಧ್ಯಕ್ಷ ಶಿವಣ್ಣೇಗೌಡ್ರ, ಹುಣಸೂರು ತಾಲೂಕು ಅಧ್ಯಕ್ಷರು ಪ್ರತಾಪ್, ಹಾಗೂ ರೈತ ಕಲ್ಯಾಣ ಸಂಘಟನೆಯ ಪದಾಧಿಕಾರಿಗಳು ಇದ್ದರು.