ಎಚ್ ಡಿ ಕೋಟೆ: ಎಚ್ ಡಿ ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಬಸವೇಶ್ವರ ಸ್ವಾಮಿಯ ಕೊಂಡೋತ್ಸವ ಅದ್ದೂರಿಯಾಗಿ ನೆರವೇರಿತು. ಯುಗಾದಿ ಹಬ್ಬದ ನಂತರ ಆಚರಿಸಲ್ಪಡುವ ಈ ಕೊಂಡೋತ್ಸವವು ಭಕ್ತಿ ಭಾವದಿಂದ ನೆರವೇರಿತು.
ಕೊಂಡೋತ್ಸವದ ಹಿನ್ನೆಲೆ ಸೋಮವಾರ ರಾತ್ರಿ ದೇವಸ್ಥಾನದ ಮುಂಭಾಗ ಮೊತ್ತ ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಶನಿ ಪ್ರಭಾವ ಅಥವಾ ರಾಜಾ ವಿಕ್ರಮ ಎಂಬ ಪೌರಾಂಬಿಕ ನಾಟಕವನ್ನು ಏರ್ಪಡಿಸಲಾಗಿತ್ತು.
ಮುಂಜಾನೆಯಿಂದಲೇ ಗಂಗಾ ಪೂಜೆ ಮಾಡಿ, ಸತ್ತಿಗೆ ಸೂರಿಪಾನಿ ಮಂಗಳವಾದ್ಯಗಳು, ವೀರಗಾಸೆ ಕುಣಿತ ನಂದಿದ್ವಜಗಳೊಂದಿಗೆ ಶ್ರೀ ಬಸವೇಶ್ವರ ಸ್ವಾಮಿಯ ವಿಗ್ರಹವನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು, ನಂತರ ದೇವಸ್ಥಾನದ ಭಾಗದಲ್ಲಿ ಕೊಂಡೋತ್ಸವ ಹಮ್ಮಿಕೊಂಡಿದ್ದು ದೇವರ ಗುಡ್ಡಪ್ಪಂದಿರು ಸೇರಿ ಭಕ್ತರು ಸುಡು ಬಿಸಿಲನ್ನು ಲೆಕ್ಕಿಸದೆ ಕೊಂಡ ಹಾಯ್ದು ಭಕ್ತಿ ಭಾವ ಮೆರೆದರು.
ಇದಾದ ಬಳಿಕ ಕೊಂಡೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರಿಗೆ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು, ಗ್ರಾಮದ ರೈತರು ತಮ್ಮ ದನ ಕರುಗಳನ್ನು ದೇವಸ್ಥಾನದ ಬಳಿ ಕರೆತಂದು ಪೂಜೆ ಸಲ್ಲಿಸಿದರು.
ಈ ವೇಳೆ ಗ್ರಾಮದ ಯಜಮಾನರುಗಳಾದ ಪುಟ್ಟೇಗೌಡ, ಪ್ರಕಾಶ್, ಕರಿಯಯ್ಯ, ಶಿವಮಲ್ಲಪ್ಪ, ಕರಿಯಪ್ಪ ಗೌಡ, ತಮ್ಮಣ್ಣ, ರವಿ, ಉಮೇಶ್ ಕೋಟೆ, ಚಂದ್ರು, ಶಿವಮೂರ್ತಿ, ಬಸವಮೂರ್ತಿ, ಗುರುಸ್ವಾಮಪ್ಪ, ನಂಜುಂಡಸ್ವಾಮಿ, ಸೋಮಣ್ಣ, ಮಲ್ಲು, ಶಿವಣ್ಣ, ಚನ್ನಬಸಪ್ಪ ಸೇರಿ ಮೊತ್ತ ಗ್ರಾಮಸ್ಥರು ಸೇರಿ ಕಟ್ಟೆಮನಗನಹಳ್ಳಿ ಹಾಲ್ತಾಳುಂಡಿ, ಅಂತರಸಂತೆ ನೂರಲಕುಪ್ಪೆ ಸೇರಿ ಅಕ್ಕಪಕ್ಕದ ಸಾವಿರಾರು ಗ್ರಾಮಸ್ಥರು ಭಾಗಿಯಾಗಿದ್ದರು.