ಈ ಹಿಂದೆಯೂ ಮಾತು ತಪ್ಪಿದ್ದ ಮುಖ್ಯಮಂತ್ರಿಗಳು, ಜನರ ಬೃಂದಾವನ ಕನಸು ದೂರ
ಬಿ.ನಿಂಗಣ್ಣಕೋಟೆ
ಎಚ್.ಡಿ.ಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸಭೆಯಲ್ಲಿ ಕಳೆದ ಶುಕ್ರವಾರ ಮಂಡಿಸಿದ ೨೦೨೩-೨೪ನೇ ಸಾಲಿನ ಪರಿಷ್ಕೃತ ಬಜೆಟ್ ತಾಲ್ಲೂಕಿನ ಜನರ ನಿರೀಕ್ಷಿತ ಯಾವ ಯೋಜನೆಗಳು ಘೋಷಣೆಯಾಗದ ಕಾರಣ ತಾಲ್ಲೂಕಿನ ಜನರ ನಿರೀಕ್ಷೆಯೂ ಹುಸಿಯಾಗಿದೆ.
ಎಚ್.ಡಿ.ಕೋಟೆ ತಾಲ್ಲೂಕು ಅತಿ ದೊಡ್ಡ ಭೂ ವಿಸ್ತೀರ್ಣ ಜತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಕಬಿನಿ ಜಲಾಶಯ ಸೇರಿದಂತೆ ೪ ಜಲಾಶಯ ಹೀಗೆ ಅಪಾರ ಪ್ರಮಾಣದ ನೈಸರ್ಗೀಕ ಸಂಪತ್ತನ್ನು ಹೊಂದಿದ್ದರೂ, ಡಾ.ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಹಿಂದುಳಿದ ತಾಲ್ಲೂಕಗಳಲ್ಲೇ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.

ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಹೆಚ್ಚು ಇರುವ ತಾಲ್ಲೂಕು ಎನಿಸಿಕೊಂಡಿದ್ದು, ಚುನಾವಣೆ ಸಂದರ್ಭ ಮತದಾರನ ಬಳಿ ಬರುವ ಜನನಾಯಕರೇಲ್ಲ ನಮ್ಮನ್ನು ಈ ಬಾರಿ ಗೆಲ್ಲಿಸಿ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ತಾಲ್ಲೂಕಿನಲ್ಲಿ ಹೆಚ್ಚಿನ ಅನುದಾನ ತಂದು ಸಾಗರೋಪಾದಿಯಲ್ಲಿ ಅಭಿವೃದ್ದಿ ಕಾರ್ಯ ಕೈಗೊಂಡು ಹಿಂದುಳಿದ ತಾಲ್ಲೂಕು ಹಣೆ ಪಟ್ಟಿಯನ್ನು ಅಳಿಸಿ ಹಾಕುತ್ತೇವೆ ಎಂದು ಬೊಬ್ಬೆ ಹೊಡೆದರೆ ಹೊರತು ಯಾರೋಬ್ಬರಿಂದಲೂ ಹಿಂದುಳಿದ ತಾಲ್ಲೂಕು ಹಣೆ ಪಟ್ಟಿ ಅಳಿಸಲು ಆಗಿಲ್ಲ.
ಹಿಂದುಳಿದ ಕ್ಷೇತ್ರದ ಅಭಿವೃದ್ದಿಗೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ, ಹಿಂದೆ ಘೋಷಣೆ ಮಾಡಿದ್ದ ಯೋಜನೆಗಳಿಗೂ ಅನುದಾನ ಬಿಡುಗಡೆ ಮಾಡಿಲ್ಲ, ಹೊಸ ತಾಲ್ಲೂಕು ಸರಗೂರಿಗೂ ಹಣ ನೀಡಿಲ್ಲ, ಅವಳಿ ತಾಲ್ಲೂಕಿನ ಜನರ ನಿರೀಕ್ಷೆ ಹುಸಿಯಾಗಿದೆ, ಕ್ಷೇತ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೂ ತಾಲ್ಲೂಕಿಗೆ ಅನುಕೂಲವಾಗಿಲ್ಲ.
- ಬೀಚನಹಳ್ಳಿ ಚಿಕ್ಕಣ್ಣ, ಮಾಜಿ ಶಾಸಕರು.
ಅದರೆ ತಾಲ್ಲೂಕಿನ ಜನ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ನಮ್ಮ ಜಿಲ್ಲೆಯವರೇ ಆದ ಸಿದ್ದರಾಮಯ್ಯನವರೇ ಈ ಬಾರಿಯೂ ಮುಖ್ಯಮಂತ್ರಿ ಆಗುತ್ತಾರೆ ಕ್ಷೇತ್ರಕ್ಕೆ ಜನರ ಪರವಾದ ವಿವಿಧ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಸಾಕಷ್ಟು ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡುತ್ತಾರೆ ಎಂದು ಕ್ಷೇತ್ರದ ಜನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಸತತ ಎರಡನೇ ಬಾರಿಗೆ ೩೬ ಸಾವಿರಕ್ಕೂ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿಕೊಟ್ಟಿದ್ದರು, ಅದರೆ ಕಳೆದ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಐತಿಹಾಸಿಕ ೧೪ನೇ ಬಜೆಟ್‌ನಲ್ಲಿ ತಾಲ್ಲೂಕಿಗೆ ಯಾವ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಹಿಂದುಳಿದ ತಾಲ್ಲೂಕಿನ ಅಭಿವೃದ್ದಿಗೆ ಮುನ್ನುಡಿ ಎಂಬಂತೆ ವಿಶೇಷ ಅನುದಾನ ನೀಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಜನರ ಕನಸು ಹುಸಿಯಾಗಿಸಿದ ಬಜೆಟ್
ಎರಡನೇ ಬಾರಿಗೆ ಜಿಲ್ಲೆಯವರೇ ರಾಜ್ಯದ ಮುಖ್ಯಮಂತ್ರಿ ಆಗುತ್ತಿರುವುದರಿಂದ ತಾಲ್ಲೂಕಿನ ಜನರು ಪ್ರಮುಖವಾಗಿ ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಮಂಡಿಸಿದ್ದ ಬಜೆಟ್ ಘೋಷಣೆ ಮಾಡಿದ್ದ ಜನರ ಬಹು ನಿರೀಕ್ಷಿತ ಯೋಜನೆ ರಾಜ್ಯದ ಜೀವನಾಡಿ ಕಬಿನಿ ಜಲಾಶಯದ ಮುಂಭಾಗದ ೩೫ ಎಕರೆ ಜಾಗದಲ್ಲಿ ಕೆಆರ್‌ಎಸ್ ಮಾದರಿ ಬೃಂದಾವನ ನಿರ್ಮಾಣ, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ತಾಲ್ಲೂಕಾಗಿ ಘೋಷಣೆಯಾಗಿದ್ದ ಸರಗೂರು ತಾಲ್ಲೂಕು ಸರ್ವಾಂಗೀಣ ಅಭಿವೃದ್ದಿಗೆ ಪೂರಕ ೧೦೦ ಹಾಸಿಗೆ ಆಸ್ಪತ್ರೆ, ಮಿನಿ ವಿಧಾನಸೌಧ ನಿರ್ಮಾಣ, ವಿವಿಧ ಪ್ರಮುಖ ಕಚೇರಿಗಳ ಕಟ್ಟಡ ನಿರ್ಮಾಣ, ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳಿಂದ ಬೆಳೆಗಳ ರಕ್ಷಣೆಗಾಗಿ ವೈಜ್ಞಾನಿಕ ಬೇಲಿ ನಿರ್ಮಾಣ, ಮೈಸೂರು ಮಾನಂದವಾಡಿ ರಸ್ತೆ ಅಭಿವೃದ್ದಿಗೆ ಹೆಚ್ಚಿನ ಅನುದಾನ ಸಿಗುತ್ತದೆ ಎಂದು ತಾಲ್ಲೂಕಿನ ಜನರು ನಿರೀಕ್ಷೆ ಮಾಡಿದ್ದರೂ, ಅದರೆ ಈ ಬಾರಿಯ ಬೃಹತ್ ಗಾತ್ರದ ಬಜೆಟ್‌ನಲ್ಲಿ ತಾಲ್ಲೂಕಿಗೆ ಯಾವುದೇ ಯೋಜನೆಯಾಗಲಿ, ಅನುದಾನವಾಗಲಿ ಘೋಷಣೆ ಆಗದ ಪರಿಣಾಮ ಜನರ ನಿರೀಕ್ಷೆಗಳು ಬುಡ ಮೇಲಾಗಿದ್ದು ತಾಲ್ಲೂಕಿನ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆಯೂ ಮಾತು ತಪ್ಪಿದ್ದ ಸಿದ್ದರಾಮಯ್ಯ
ಕಳೆದ ೨೦೧೪ರ ಲೋಕಸಭೆ ಚುನಾವಣೆ ಸಂದರ್ಭ ತಾಲ್ಲೂಕು ಕೇಂದ್ರದ ಉಪ್ಲಿಕೆರೆ ಮೈದಾನದಲ್ಲಿ ನಡೆದ ಪಕ್ಷದ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಂಸದ ದಿವಂಗತ ಆರ್.ಧೃವನಾರಾಯಣ್ ಅವರನ್ನು ಗೆಲ್ಲಿಸಿದರೇ, ಹಿಂದುಳಿದ ಎಚ್.ಡಿ.ಕೋಟೆ ಕ್ಷೇತ್ರವನ್ನು ದತ್ತು ಪಡೆಯುವುದಾಗಿ ಘೋಷಣೆ ಮಾಡಿ ತಾಲ್ಲೂಕನ್ನು ದತ್ತು ತಗೆದುಕೊಳ್ಳದೆ ಮಾತು ತಪ್ಪಿದ್ದರು, ಜೊತೆಗೆ ಕಬಿನಿ ಜಲಾಶಯದ ಮುಂಭಾಗದ ವಿಶಾಲ ಜಾಗದಲ್ಲಿ ಕೆಆರ್‌ಎಸ್ ಮಾದರಿ ಬೃಂದಾವನ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿ ಬೃಂದಾವಣ ನಿರ್ಮಾಣ ಜವಾಬ್ದಾರಿಯನ್ನು ಐಡೆಕ್ ಕಂಪನಿಗೆ ನೀಡಿದ್ದರೂ ಬೃಂದಾವನ ನಿರ್ಮಾಣ ಇನ್ನೂ ಕನಸಾಗಿಯೇ ಉಳಿದಿದೆ.
ಒಟ್ಟಾರೆ, ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ರಾಜ್ಯದ ಜನರಿಗೆ ನೀಡಿದ್ದ ೫ ಗ್ಯಾರಂಟಿ ಭಾಗ್ಯಗಳನ್ನು ಜಾರಿಗೊಳಿಸುವ ಮುಂದಾಗಿ ಈ ಬಾರಿಯ ಬಜೆಟ್‌ನಲ್ಲಿಯೂ ಕ್ಷೇತ್ರಕ್ಕೆ ಯಾವ ಯೋಜನೆ ಅನುದಾನ ನೀಡಿಲ್ಲ ಎಂಬ ಮಾತು ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿದೆ.
ಇನ್ನೂ ಕ್ಷೇತ್ರದಲ್ಲಿ ಮುಂಗಾರು ತಡವಾಗದರೂ ಚುರುಕುಗೊಂಡಿದ್ದು ಡೆಡ್ ಸ್ಟೋರೆಜ್ ತಲುಪಿದ್ದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಜಲಾಶಯ ಈ ತಿಂಗಳ ಕೊನೆಯಲ್ಲಿ ಭರ್ತಿಗೊಳ್ಳುವ ನಿರೀಕ್ಷೆಯಿದೆ, ಭರ್ತಿಗೊಂಡ ಜಲಾಶಯಕ್ಕೆ ಬಾಗಿನ ಆರ್ಪಿಸಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಮಿಸಲಿದ್ದು, ಹಿಂದುಳಿದ ಹೆಚ್.ಡಿ.ಕೋಟೆ ತಾಲ್ಲೂಕು ಹಾಗೂ ಹೊಸ ತಾಲ್ಲೂಕು ಸರಗೂರು ಅಭಿವೃದ್ದಿಗೆ ಯಾವ ಯೋಜನೆ, ಅನುದಾನ ನೀಡುವರು ಕಾದು ನೋಡಬೇಕು.
