Thursday, April 3, 2025
Google search engine

Homeರಾಜಕೀಯಕಾಂಗ್ರೆಸ್ ಸರಕಾರದ ವಿರುದ್ಧ ಪರ್ಸಂಟೇಜ್ ಆರೋಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ

ಕಾಂಗ್ರೆಸ್ ಸರಕಾರದ ವಿರುದ್ಧ ಪರ್ಸಂಟೇಜ್ ಆರೋಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಹಿಂದಿನ ಬಿಜೆಪಿ ಸರಕಾರದಲ್ಲಿ ನಡೆದಿದ್ದ ಕಾಮಗಾರಿಗಳಿಗೆ ಎಲ್ ಒಸಿ (LOC) ಕೊಡಲು ರಾಜ್ಯ ಕಾಂಗ್ರೆಸ್ ಸರಕಾರ ಪರ್ಸಂಟೇಜ್ ಫಿಕ್ಸ್ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ  ನೇರ ಆರೋಪ ಮಾಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬೆಂಗಳೂರು ನಗರದ ಮುಖಂಡರ ಆತ್ಮಾವಲೋಕನ ಸಭೆಯಲ್ಲಿ ಭಾಗಿಯಾಗುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಹಿಂದಿನ ಬಿಜೆಪಿ ಸರಕಾರವನ್ನು 40 ಪರ್ಸೆಂಟ್ ಸರಕಾರ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್, ಈಗ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಮಾಡುತ್ತಿದೆ. ಹಿಂದಿನ ಸರಕಾರದಲ್ಲಿ ಕೈಗೊಳ್ಳಲಾಗಿದ್ದ ಕಾಮಗಾರಿಗಳಿಗೆ LOC ಕೊಡುವುದಕ್ಕೆ ಈ ಸರಕಾರದಲ್ಲಿ 5% ಫಿಕ್ಸ್ ಮಾಡಿದ್ದಾರೆ. ಇಂಥವರು ಭಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರದಲ್ಲಿ ಪ್ರಾರಂಭಿಕ ಹಂತದಲ್ಲಿಯೇ ಅಧಿಕಾರಿಗಳ ಸಭೆ ನಡೆದಿದೆ. ಆ ಸಭೆಯಲ್ಲಿ ಅಧಿಕಾರಿಗಳಿಗೆ ಯಾವ ರೀತಿ ಪಾಠ ಮಾಡಿದ್ದಾರೆ ಇವರು ಎನ್ನುವ ಮಾಹಿತಿ ನನಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರು ಕೆಲವು ಸೂಚನೆಗಳನ್ನು ಕೊಟ್ಟಿದ್ದಾರೆ. ನಾವು ಹೇಳಿದಂತೆ ಮಾತ್ರ ಕೇಳಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ. ಇದರ ಅರ್ಥ ಏನೆಂದರೆ, ನಮಗೆ ಬೇಕಾದ ಹಾಗೆ ಕೆಲಸ ಮಾಡಿ, ಇಲ್ಲವೇ ಹೊರಡಿ ಎನ್ನುವುದೇ ಈ ಫರ್ಮಾನಿನ ಒಳಾರ್ಥ ಎಂದು ದೂರಿದರು.

ಪ್ರಾರಂಭಿಕ ಹಂತದಲ್ಲಿ ಕಾಂಗ್ರೆಸ್ ಸರಕಾರ ಕೆಲವು ನಿರ್ಧಾರ ತೆಗೆದುಕೊಂಡಿದೆ. ಹಿಂದಿನ ಟೆಂಡರ್ ಗಳು ಸೇರಿದಂತೆ ಅನೇಕ ಕಡೆ ಅನುದಾನ ತಡೆ ಹಿಡಿಯಲಾಗಿದೆ. ಬಿಜೆಪಿ ಸರಕಾರ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿತ್ತು.  ಕಳೆದ ಮೇ 6ರಂದು 675 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳ ಗುತ್ತಿಗೆದಾರರಿಗೆ ಎಲ್ ಒಸಿ ರಿಲೀಸ್ ಆಯಿತು. ಆ ಸಂದರ್ಭದಲ್ಲಿ ಒಬ್ಬ ಕಾಂಗ್ರೆಸ್ ಎಂಪಿ ಹೇಳಿದ್ದರಂತೆ, ಯಾವುದೇ ಕಾರಣಕ್ಕೂ ಹಣ ಬಿಡುಗಡೆ ಮಾಡಬೇಡಿ, ನಮ್ಮ ಸರ್ಕಾರ ಬರುತ್ತದೆ ಅಂತ ಹೇಳಿದ್ದರಂತೆ ಅವರು. ಅವರು ಯಾಕೆ ಹೇಳಿದ್ದರು? ಯಾರು ಆ ಎಂಪಿ ಯಾರು? ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಶ್ನಿಸಿದರು.

675 ಕೋಟಿ ಮೊತ್ತದ ಎಲ್ ಒಸಿ ಹಣ ಯಾಕೆ ಬಿಡುಗಡೆ ಆಗಲಿಲ್ಲ ಎನ್ನುವುದು ಅನುಮಾನಕ್ಕೆ ಕಾರಣ. ಈಗ LOC ಬಿಡುಗಡೆ ಆಗಬೇಕು ಅಂದರೆ 5 ಪರ್ಸೆಂಟ್ ಕೊಡಲೇಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರೆ. 40 ಪರ್ಸೆಂಟ್ ಜತೆಗೆ ಹೆಚ್ಚುವರಿಯಾಗಿ 5 ಪರ್ಸೆಂಟ್ ಕೊಟ್ರೆ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದಾರಂತೆ. ಅಲ್ಲಿಗೆ ಇದು 45 ಪರ್ಸೆಂಟ್ ಸರಕಾರ ಎಂದಾಯಿತಲ್ವೆ? ಆಗಿರುವ ಕಾಮಗಾರಿಗಳಿಗೆ ಪರ್ಸಂಟೇಜ್ ಕೇಳುತ್ತಿದ್ದಾರೆ, ಇವರು ಸತ್ಯ ಹರಿಶ್ಚಂದ್ರರು ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular